

ಪ್ರಕಾಶ್ ಮಂಜೇಶ್ವರ, ಮಂಗಳೂರು
ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಆಕ್ರಮಣಶೀಲ ಚಿರತೆಯ ದರ್ಶನ ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ 10 ಬೋನುಗಳನ್ನು ಇರಿಸಿದ್ದು, ಇಲ್ಲಿಯ ತನಕ ಪ್ರಯೋಜನವಾಗಿಲ್ಲ. ಚಿರತೆಯನ್ನು ಆಕರ್ಷಿಸಲು ಬೋನುಗಳಲ್ಲಿ ತಂದಿರಿಸಿದ ನಾಯಿಗಳು ಇಲಾಖೆ ಸಿಬ್ಬಂದಿ ತಂದುಕೊಟ್ಟ ಆಹಾರ ತಿಂದುಂಡು ಆರಾಮವಾಗಿವೆ!
ಚಿರತೆ ಓಡಾಟದ ಜಾಡು ಕಂಡುಬಂದಿರುವ ಮಿಜಾರು, ಎಡಪದವು, ಬಜಪೆ, ಮೂಡು ಪೆರಾರು, ಕೆಂಜಾರು, ಮಂಜಲ್ಪಾದೆ, ಮುಡಿಪು ಮುಂತಾದ ಪ್ರದೇಶ ಮತ್ತು ಪರಿಸರದ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಚಿರತೆ ಹಲವು ಬಾರಿ ಕಂಡುಬಂದಿದ್ದರೂ, ಇಲ್ಲಿಯ ತನಕ ಮನುಷ್ಯರ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ.
ಹೊಟ್ಟೆಪಾಡು: ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಕರಾವಳಿಯ ಜನವಸತಿ ಪ್ರದೇಶಗಳ ನಡುವೆ ಚಿರತೆ ಓಡಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಕಡಬದಲ್ಲಿ ಇತ್ತೀಚೆಗೆ ಕೋಳಿ ಹಿಡಿಯುವ ಪ್ರಯತ್ನದ ಮಾಡಿದ ಚಿರತೆ ಕೋಳಿಯ ಜೊತೆಗೆ ಬಾವಿಗೆ ಬಿದ್ದಿತ್ತು.
ಬಜಪೆ, ಕೆಂಜಾರು ಸಹಿತ ಚಿರತೆ ಸವಾರಿ ಕಂಡು ಬಂದಿರುವ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಲ್ಲಿ 100ಕ್ಕೂ ಅಧಿಕ ನಾಯಿ ಹಾಗೂ ಸುಮಾರು ನಾಲ್ಕು ಕರುಗಳು ಕಣ್ಮರೆಯಾಗಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ.
ಎಲ್ಲಿಂದ ಪ್ರವೇಶ?: ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಜನರ ಓಡಾಟ ಅಪರೂಪ ಎನ್ನುವ ಸಂದರ್ಭ ಕುದುರೆಮುಖ ಅರಣ್ಯ ಪ್ರದೇಶದಿಂದ ಪ್ರವೇಶಿಸಿರುವ ಚಿರತೆಗಳು ಇಲ್ಲಿ ಬೀಡುಬಿಟ್ಟಿರಬಹುದು ಎನ್ನುತ್ತಾರೆ ಮಂಗಳೂರು ಅರಣ್ಯ ವಿಭಾಗದ ಆರ್‌ಎಫ್‌ಒ ಪ್ರಶಾಂತ್ ಪೈ. ಹತ್ತಿರದ ಜಿಲ್ಲೆಗಳಿಂದ ಚಿರತೆಗಳನ್ನು ತಂದು ಇಲ್ಲಿ ಬಿಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆಯಾದರೂ ಇಂತಹ ಸಾಧ್ಯತೆಗಳು ತೀರ ಕಡಿಮೆ ಎನ್ನುವ ಅಭಿಪ್ರಾಯ ಅವರದು.
ಕೋಳಿ/ ಪ್ರಾಣಿ ತ್ಯಾಜ್ಯ ಸಮಸ್ಯೆ: ಜನಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಜನರು ಕೋಳಿ ಹಾಗೂ ವಿವಿಧ ಪ್ರಾಣಿಗಳ ಮಾಂಸದ ತ್ಯಾಜ್ಯ ಎಸೆಯುತ್ತಿರುವುದು ಚಿರತೆಗಳನ್ನು ಆಕರ್ಷಿಸಲು ಕಾರಣವಾಗುತ್ತಿವೆ ಎನ್ನಲಾಗುತ್ತಿದೆ. ಕೋಳಿ ಹಾಗೂ ಮಾಂಸದ ತ್ಯಾಜ್ಯಗಳನ್ನು ತಿನ್ನಲು ಬೀದಿ ನಾಯಿ, ಹಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಈ ನಾಯಿಗಳ ಬೇಟೆಗೆ ಚಿರತೆಗಳು ಹೊಂಚುಹಾಕಿ ಕುಳಿತಿರುತ್ತವೆ. ಇತರ ಪ್ರಾಣಿ ಮತ್ತು ಮನುಷ್ಯನ ಇರುವಿಕೆಯನ್ನು ಸುಮಾರು ನಾಲ್ಕು ಕಿ.ಮೀ.ದೂರದಲ್ಲೇ ಚಿರತೆಗಳು ಗ್ರಹಿಸಬಲ್ಲವು ಎನ್ನುತ್ತಾರೆ ತಜ್ಞರು.
ಚಿರತೆ ಸಾಕುತ್ತಿದ್ದರು!: 15 ವರ್ಷಗಳ ಹಿಂದೆ ಮಂಗಳೂರು ಬಾವುಟಗುಡ್ಡೆ, ಅಲೋಶಿಯಸ್ ಕಾಲೇಜು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿತ್ತು. ಯಾರೋ ಗುಟ್ಟಾಗಿ ಸಾಕಿದ ಚಿರತೆ ಸದ್ಯ ತಪ್ಪಿಸಿಕೊಂಡಿರಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಂದೇಹ ವ್ಯಕ್ತಪಡಿಸಿದ್ದರು. ಇಲ್ಲದಿದ್ದರೆ ಆ ಪ್ರದೇಶದಲ್ಲಿ ಆ ಪ್ರಾಣಿ ಗೋಚರಿಸಲು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ.
ಆಹಾರ ಹುಡುಕಿಕೊಂಡು ಚಿರತೆಗಳು ಕರಾವಳಿ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿವೆ. ಅಧಿಕ ಸಂಖ್ಯೆಯಲ್ಲಿ ಇರುವ ಬೀದಿನಾಯಿ, ಕೋಳಿ, ನವಿಲು ಮುಂತಾದ ಪ್ರಾಣಿ, ಪಕ್ಷಿಗಳು ಅವುಗಳಿಗೆ ಸುಲಭ ತುತ್ತಾಗುತ್ತಿವೆ. ಚಿರತೆ ಓಡಾಟ ಸಂಭಾವ್ಯ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ಓಡಾಡಬೇಕು. ಆಕಸ್ಮಿಕವಾಗಿ ಎದುರಾದಲ್ಲಿ ಅವುಗಳನ್ನು ಕೆರಳಿಸುವ ದುಸ್ಸಾಹಸಕ್ಕೆ ಮುಂದಾಗುವುದು ಅಪಾಯಕಾರಿ. ಜನವಸತಿ ಪ್ರದೇಶಗಳಲ್ಲಿ ಚಿರತೆಗಳನ್ನು ಜೀವಂತ ಹಿಡಿಯಲು ಇಲಾಖೆ ಬೋನುಗಳನ್ನು ಇರಿಸಿದೆ.
ಪ್ರಶಾಂತ್ ಪೈ ಆರ್‌ಎಫ್‌ಒ, ಮಂಗಳೂರು ಅರಣ್ಯ ವಿಭಾಗ