ಬೋನಿಗೆ ಬೀಳದ ಚಿರತೆ

Published on

ಸಕಲೇಶಪುರ : ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ವಾರದಿಂದ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಫಲ ನೀಡಿಲ್ಲ. ಕಳೆದೊಂದು ವಾರದ ಹಿಂದೆ ಗ್ರಾಮದ ಹೊರವಲಯದ ಹೇಮಾವತಿ ನದಿ ದಂಡೆಯಲ್ಲಿ ಮೇವಿಗಾಗಿ ಕಟ್ಟಿ ಹಾಕಲಾಗಿದ್ದ ಹಸುವನ್ನು ಕೊಂಂದು ತಿಂದಿದ್ದ ಚಿರತೆ ಮರುದಿನ ಮತ್ತೊಂದು ಹಸುವನ್ನು ಬಲಿ ಪಡೆದಿತ್ತು. ಇದರಿಂದ ಗಾಬರಿಯಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಅರಕಲಗೂಡಿನಿಂದ ಬೋನು ತರಿಸಿ ಹಸು ಕೊಂದಿದ್ದ ಸ್ಥಳದಲ್ಲಿ ಇಡಲಾಗಿತ್ತು. ಆದರೆ, ಮೂರು ದಿನ ಕಳೆದರೂ ಚಿರತೆ ಇತ್ತ ಸುಳಿಯಲೇ ಇಲ್ಲ. ಮೊನ್ನೆ ಮಾವಿನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಎದುರೇ ಕೋಳಿ ಬೇಟೆಯಾಡಿದ ಚಿರತೆ ಉಪಟಳದಿಂದ ಗ್ರಾಮಸ್ಥರು ಇನ್ನಷ್ಟು ಭೀತಿಗೊಂಡರು.
ಈ ಹಿನ್ನೆಲೆೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ 7 ಬೋನು ಹಾಗೂ 6 ಕಡೆ ಸಿಸಿ ಕ್ಯಾಮರಾ ಅಳವಡಿಸಿ ಗ್ರಾಮಸ್ಥರ ರಕ್ಷಣೆಗೆ ಕಾಳಜಿ ತೋರಿದೆ. ಆದರೂ ಚಿರತೆ ಇತ್ತ ಸುಳಿದಿಲ್ಲದಿರುವುದು ಅಚ್ಚರಿ ತರಿಸಿದೆ.
ಚಿರತೆ ಚಲನ ವಲನದ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗಿದ್ದರೂ ಗ್ರಾಮಸ್ಥರು ತೋಟ,ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಸಿಮೆಂಟ್ ಮಂಜು ಅವರಿಗೂ ಸಮಸ್ಯೆ ವಿವರಿಸಿ ನೋವು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆಯ ಸಿಸಿಎಫ್ ರವಿಶಂಕರ್, ಡಿಎಫ್‌ಒ ಮೊಹನ ಕುಮಾರ ಮತ್ತು ಉಪವಿಭಾಗಧಿಕಾರಿ ಡಾ. ಶ್ರುತಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಸೆರೆ ಕಾರ್ಯಾಚರಣೆ ಬಗ್ಗೆ ಗಮನ ಹರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net