

ಗುಂಡ್ಲುಪೇಟೆ : ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದುಹಾಕಿದ ಘಟನೆ ಶುಕ್ರವಾರ ನಡೆದಿದೆ.
ಇದು ಗ್ರಾಮಸ್ಥರ ಭೀತಿ ಇಮ್ಮಡಿಯಾಗಲು ಕಾರಣವಾಗಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಶಿವಶಂಕರಪ್ಪ ಎಂಬುವರ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ಹಸುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದುಹಾಕಿದೆ. ಸತ್ತ ಹಸುವನ್ನು ಸ್ವಲ್ಪದೂರ ಎಳೆದೊಯ್ದು ಹಿಂಭಾಗವನ್ನು ಪೂರ್ತಿಯಾಗಿ ತಿಂದುಹಾಕಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲೇ ಚಿರತೆಯು ಹಸುವನ್ನು ಕೊಂದುಹಾಕಿರುವುದು ಗ್ರಾಮಸ್ಥರ ಭೀತಿಗೆ ಕಾರಣವಾಗಿದ್ದು ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ವಿಷಯ ತಿಳಿದ ಬಫರ್ ವಲಯದ ಉಪ ವಲಯಾರಣ್ಯಾಧಿಕಾರಿ ಭರತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಶೀಘ್ರವೇ ಪರಿಹಾರ ಕೊಡಿಸುವ ಭರವಸೆ ನೀಡಿದರು.ಈ ಭಾಗದಲ್ಲಿ ಸಂಚರಿಸುತ್ತಿರುವ ಚಿರತೆ ಸೆರೆಗೆ ಘಟನೆ ನಡೆದ ಸಮೀಪದಲ್ಲಿಯೇ ಬೋನು ಅಳವಡಿಸಿದೆ. ಆದರೂ ಚಾಲಾಕಿ ಚಿರತೆ ಬೋನಿಗೆ ಬೀಳದೆ ಜಾನುವಾರುಗಳನ್ನು ಕೊಲ್ಲುತ್ತಿದೆ. ಶೀಘ್ರವೇ ಚಿರತೆಯ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಫರ್ ವಲಯದ ಪ್ರಭಾರ ವಲಯ ಅರಣ್ಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.