

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷಾಚರಣೆಯ ನವೋಲ್ಲಾಸದ ಸಡಗರ ಎಲ್ಲೆಡೆ ಮೇಳೈಸಿತ್ತು. ಮೋಜು-ಮಸ್ತಿ, ಹಾಡು, ಕುಣಿತ, ಸಂಗೀತದ ನಶೆಯಲ್ಲಿ ಯುವ ಜನರು ತೇಲಾಡಿದರು.
ಸಾರ್ವಜನಿಕರು 2023ಕ್ಕೆ ಬೈ ಬೈ ಹೇಳಿ 2024ಕ್ಕೆ ಹಾಯ್.. ಹಾಯ್. ಅಂದರು. ಕೆಲ ಯುವಕರು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸುತ್ತ ಅಮಲಿನಲ್ಲೇ ಮೈಮರೆತರು. ಪ್ರವಾಸಿಗರು ಉತ್ಸಾಹದಿಂದ ವರ್ಷಾಚರಣೆಯ ಸಡಗರದಲ್ಲಿ ಮಿಂದೆದ್ದರು.
ಪಾಶ್ಚಾತ್ಯ ಸಂಗೀತದ ಅಬ್ಬರ, ಕಲರ್ ಫುಲ್ ಲೈಟಿಂಗ್ಸ್‌ನ ಮಿಂಚಿನ ನಡುವೆ ಯುವಕ-ಯುವತಿಯರು ನರ್ತಿಸಿದರು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಎಂದು ಜೋರಾಗಿ ಕೂಗುತ್ತ, ತಮ್ಮ ಆಪ್ತರನ್ನು ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಂಭ್ರಮಾಚರಣೆಗೆ ರಾತ್ರಿ 1 ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಎಲ್ಲೆಡೆ ಪೊಲೀಸ್ ಕಣ್ಗಾವಲಿತ್ತು.
ನಗರದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಕ್ಲಬ್,ರೆಸಾರ್ಟ್, ಹೋಂ ಸ್ಟೇ, ಸರ್ವೀಸ್ ಅಪಾರ್ಟ್‌ಮೆಂಟ್, ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಂತೋಷ ಕೂಟ ನಡೆಸಲಾಯಿತು. ಹ್ಯಾಪಿ ನ್ಯೂ ಇಯರ್ ಕಾರ್ಯಕ್ರಮ ನಗರದ ವಿವಿಧೆಡೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮದ್ಯದ ಹೊಳೆಯೇ ಹರಿಯಿತು.
ನಗರದಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲೂ ಡಿ.31ರ ಸಂಭ್ರಮಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಿದ್ದವು. ಪಂಚಾತಾರಾ ಹೋಟೆಲ್‌ಗಳನ್ನು ಆಕರ್ಷಕವಾಗಿ ಸಿಂಗರಿಸಿ ಗ್ರಾಹಕರನ್ನು ಬರ ಮಾಡಿಕೊಳ್ಳಲಾಯಿತು. ಬಹುತೇಕ ಹೋಟೆಲ್‌ನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಜನರನ್ನು ಮನರಂಜಿಸಲಾಯಿತು.
ನಗರ ಹಾಗೂ ಹೊರವಲಯದಲ್ಲಿರುವ ಮಧ್ಯಮ ಪ್ರಮಾಣದ ಹೋಟೆಲ್, ರೆಸಾರ್ಟ್, ಕ್ಲಬ್, ಪಬ್‌ಗಳು ಅಲಂಕಾರಗೊಂಡು ಗ್ರಾಹಕರನ್ನು ಸ್ವಾಗತಿಸಿದ್ದವು. ಹೊಸ ವರ್ಷಕ್ಕಾಗಿ ನೃತ್ಯ, ಗಾಯನ ಸೇರಿದಂತೆ ವಿವಿಧ ರಂಜನೀಯ ಕಾರ್ಯಕ್ರಮ ಆಯೋಜಿಸಿದ್ದರಿಂದ ನ್ಯೂ ಇಯರ್ ಪಾರ್ಟಿಗಳ ಕಲವರ ಕತ್ತಲಿನಲ್ಲಿ ಕಳೆಗಟ್ಟಿತ್ತು. ಕುಟುಂಬದವರೊಂದಿಗೆ ವರ್ಷಾಚರಣೆ ಮಾಡಲು ಇಲ್ಲಿಗೆ ಜನರು ಬಂದಿದ್ದರು. ತಿಂಡಿ-ತಿನಿಸು, ಪಾನೀಯಗಳನ್ನು ಒಳಗೊಂಡ ಪ್ಯಾಕೇಜ್ ಮೂಲಕ ಹೋಟೆಲ್‌ಗಳು ಆತಿಥ್ಯ ನೀಡಿದವು. ಇಲ್ಲಿ ನಡೆದ ನೃತ್ಯ, ಸಂಗೀತ ಅಲೆಯಲ್ಲಿ ಗ್ರಾಹಕರು ಕಳೆದುಹೋದರು.
ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಂಪ್ರದಾಯ. ಅದೇ ರೀತಿ ನಗರದ ಹೋಟೆಲ್, ರೆಸಾರ್ಟ್, ಬಡಾವಣೆಯ ಪ್ರಮುಖ ಸ್ಥಳಗಳಲ್ಲಿ ಯುವಕರು ಕೇಕ್ ಕತ್ತರಿಸಿ ಸಂತೋಷವನ್ನು ವಿನಿಮಯ ಮಾಡಿಕೊಂಡರು. ಇನ್ನೂ ಕೆಲವರು ಮನೆಗಳಲ್ಲೇ ಕೇಕ್ ಕತ್ತರಿಸಿದರು. ರಾತ್ರಿ 12 ಸಮೀಪಿಸುತ್ತಿದ್ದಂತೆಯೇ ಜನರು ಪಟಾಕಿ ಸಿಡಿಸಿದರು.
ವರ್ಷಾಚರಣೆ ಮೇಲೆ ಪೊಲೀಸರು ಕಣ್ಗಾವಲು ಇಟ್ಟಿದ್ದರು. ನಗರದ ಆಯಕಟ್ಟಿನ ಜಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಯುವತಿಯರಿಗೆ ಕೀಟಲೆ ಮಾಡುವ ಪುಂಡರಿಗೆ ಕಡಿವಾಣ ಹಾಕಲು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ 8 ಚಾಮುಂಡಿ ಪಡೆ (ಸುರಕ್ಷತಾ ಪಿಂಕ್ ಗರುಡ) ಅರಮನೆ ಸೇರಿದಂತೆ ವಿವಿಧ ಕಡೆ ಸಂಚರಿಸಿ ಸುರಕ್ಷತೆಯನ್ನು ಖಾತ್ರಿಪಡಿಸಿತು.
ವರ್ಷಾಚರಣೆ ನೆಪದಲ್ಲಿ ವಿದ್ಯಾರ್ಥಿಗಳು, ಯುವಕರು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುವ ಯುವಕರ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.
ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. 300ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳ ಮೂಲಕ ಕಂಟ್ರೋಲ್ ರೂಮ್‌ನಲ್ಲೇ ಕುಳಿತು ಸಾರ್ವಜನಿಕರ ಚಲನವಲನವನ್ನು ವೀಕ್ಷಿಸಲಾಯಿತು.
ನಗರಕ್ಕೆ ಬಂದಿದ್ದ ಪ್ರವಾಸಿಗರ ಚಟುವಟಿಕೆಗಳ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದರು. ಅರಮನೆ ಆವರಣದಲ್ಲಿ ವಿಶೇಷವಾಗಿ ಹೊಸ ವರ್ಷ ಆಚರಣೆ ಕಾರ್ಯಕ್ರಮ ಇರುವುದರಿಂದ 10 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಈ ಹಿನ್ನಲೆಯಲ್ಲಿ ಅರಮನೆ ಸುತ್ತ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಸಂಜೆ 7ರಿಂದಲೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.
ವರ್ಷಾಚರಣೆಗೆ ಅರಮನೆಯೂ ಸಾಕ್ಷಿಯಾಯಿತು. ಪೊಲೀಸ್ ಬ್ಯಾಂಡ್‌ನ ಸಂಗೀತ ಕಾರಂಜಿ, ಪಟಾಕಿ ಚಿನ್ನಾಟ ಇನ್ನಷ್ಟು ರಂಗು ತುಂಬಿತು.
ವಿದ್ಯುತ್ ದೀಪಾಲಂಕಾರದಿಂದ ಅರಮನೆ ಜಗಮಗಿಸಿತು. ಬೆಳಕಿನ ವೈಭವದ ನಡುವೆ ಪೊಲೀಸ್ ಇಲಾಖೆಯಿಂದ ನಡೆದ ಪೊಲೀಸ್ ಸಮೂಹ ವಾದ್ಯಮೇಳ ಸಂಗೀತದ ನಿನಾದವನ್ನೇ ಹೊರಹೊಮ್ಮಿಸಿತು. ಆಂಗ್ಲ ಬ್ಯಾಂಡ್ ಮತ್ತು ಕರ್ನಾಟಕ ಶಾಸ್ತ್ರೀಯ ವಾದ್ಯವೃಂದ ನಡುವೆ ನಡೆದ ರಾಗಲಹರಿಯ ಜುಗಲ್‌ಬಂದಿ ಗಮನ ಸೆಳೆಯಿತು. ಈ ಗೀತಾಟದಲ್ಲಿ ಐರೋಷ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಸೋನೆ ಮಳೆ ಸುರಿಯಿತು.
ಕರ್ನಾಟಕ ವಾದ್ಯವೃಂದದಿಂದ ಸ್ವಾಮಿ ನಿನ್ನೇ ಕೋರಿ, ಮಹಾಗಣಪತಿ, ಗಾನಮೂರ್ತಿ, ಶ್ರೀ ಚಾಮುಂಡೇಶ್ವರಿ ಭಜನೆ, ಶರಣಭವ, ಶ್ರೀ ಕಾಂತಿಮತಿ ಇನ್ನಿತರ ಗೀತೆಗಳನ್ನು ನುಡಿಸಲಾಯಿತು. ಇದಕ್ಕೆ ಪ್ರತಿಯಾಗಿ ಆಂಗ್ಲ ವಾದ್ಯವೃಂದದಿಂದ ಜೇಮ್ಸ್ ಬಾಂಡ್ ಸಿನಿಮಾದ ಶೀರ್ಷಿಕೆ ಹಾಡು, ಫೈರಟ್ಸ್ ಆಫ್ ದಿ ಕೆರೆಬಿಯನ್, ಜನಪ್ರಿಯ ಲ್ಯಾಟಿನ್ ಪಾಪ್ ಸರಣಿಯ ಗೀತೆಗಳು ಇನ್ನಿತರ ಗೀತೆಗಳನ್ನು ಸೊಗಸಾಗಿ ನುಡಿಸಲಾಯಿತು.
ರಾತ್ರಿ 12ಗಂಟೆ ಕಳೆಯುತ್ತಿದ್ದಂತೆ ಪಟಾಕಿ ಚಿನ್ನಾಟ ರಂಗ ತುಂಬಿತು. 15 ನಿಮಿಷಗಳ ಕಾಲ ಶಬ್ದರಹಿತ ಹಸಿರು ಪಟಾಕಿ ಸಿಡಿಸಲಾಯಿತು. ಬಾನಂಗಳದಲ್ಲಿ ಪಟಾಕಿ ಚಿಮ್ಮುತ್ತಿದ್ದಂತೆ ನೆರೆದಿದ್ದವರು ಶುಭಾಶಯ ವಿನಿಮಯ ಮಾಡಿಕೊಂಡರು.
ಮಾಗಿ ಉತ್ಸವದ ಅಂಗವಾಗಿ 10 ದಿನಗಳ ಕಾಲ ಆಯೋಜಿಸಿದ್ದ ಪುಷ್ಪಪ್ರದರ್ಶನ ರಂಗು ಪಡೆದುಕೊಂಡಿತ್ತು. ಇದು ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿತು. ಅಂದಾಜು 10 ಸಾವಿರಕ್ಕಿಂತ ಹೆಚ್ಚು ಜನರು ಇಲ್ಲಿ ಸೇರಿದ್ದರು. ಇದರಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.