ಹರಪುತ್ರನಿಗೆ ಮೊಳಗಿದ ಜಯಘೋಷ…

CTD 20 SREE PRASANNA GANAPATHI
Published on

ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ಕೋಟೆನಾಡಿನಾದ್ಯಂತ ಪ್ರತಿಷ್ಠಾಪಿಸಿದ್ದ ಸಾವಿರಾರು ಸಾರ್ವಜನಿಕ ಮೂರ್ತಿಗಳ ಪೈಕಿ 1,034 ಮೂರ್ತಿಗಳನ್ನು ಮೂರನೇ ದಿನವಾದ ಬುಧವಾರ ವಿಸರ್ಜಿಸುವ ಮೂಲಕ ಸಂಘಟಕರು ಗಣೇಶೋತ್ಸವ ಸಂಪನ್ನಗೊಳಿಸಿದರು. ಈ ವೇಳೆ ಹರಪುತ್ರ ವಿನಾಯಕನಿಗೆ ಜಯಘೋಷ ಮೊಳಗಿಸಿದರು…

ಮಂಟಪಗಳಲ್ಲಿ ಪ್ರತಿಷ್ಠಾಪಿಸಿದ್ದ ಸ್ವಾಮಿಯ ಮೂರ್ತಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ, ಪ್ರಾರ್ಥನೆ, ಅರ್ಚನೆ, ಮಹಾಮಂಗಳಾರತಿ ಸೇರಿ ಇತರ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

ಜಿಲ್ಲೆಯ ನಗರ, ಪಟ್ಟಣ, ವಿವಿಧ ಗ್ರಾಮಗಳು ಒಳಗೊಂಡು ವಿವಿಧೆಡೆ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಸ್ವಾಮಿಯ ಪೂಜಾ ಕಾರ್ಯಕ್ಕೆ ಸಹಕರಿಸಿದ ಅನೇಕರ ಮನೆಗಳಿಗೆ ಸಂಘಟಕರು ಪ್ರಸಾದ ತಲುಪಿಸಿದರು.

ಸಂಜೆ 4ರ ನಂತರ ಅಲಂಕೃತ ಟ್ರಾೃಕ್ಟರ್‌ನೊಳಗೆ ಗಣಪನ ಮೂರ್ತಿ ಪ್ರತಿಷ್ಠಾಪಿಸಿ, ಬೃಹತ್ ಹೂವಿನ ಹಾರಗಳನ್ನಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ವಿಸರ್ಜನೆ ಕಾರ್ಯ ನಡೆಸಿದರು.

ಪಟಾಕಿ ಸಿಡಿಸಿ, ವಿವಿಧ ವರ್ಣದ ಕಾಗದಗಳ ಸುರಿಮಳೆಗೈದು ಸ್ವಾಮಿಯನ್ನು ಮಾರ್ಗಗಳಲ್ಲಿ ಭಕ್ತರು ಸ್ವಾಗತಿಸಿದರು. ಡೊಳ್ಳು, ಉರುಮೆ, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ಯುವಕರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಸ್ಥಳಗಳಲ್ಲಿ ವಿಸರ್ಜನಾ ಕಾರ್ಯ ನೆರವೇರಿತು.

ಬಿಗಿ ಪೊಲೀಸ್ ಭದ್ರತೆ: ಮೆರವಣಿಗೆ ಅಂಗವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ 24, ಕೋಟೆ 39, ಬಡಾವಣೆ 23, ಗ್ರಾಮಾಂತರ 66, ತುರುವನೂರು 39, ಭರಮಸಾಗರ 125, ಹೊಳಲ್ಕೆರೆ 67, ಚಿಕ್ಕಜಾಜೂರು 25, ಚಿತ್ರಹಳ್ಳಿ ಗೇಟ್ 49, ಹಿರಿಯೂರು ಗ್ರಾಮಾಂತರ 85, ಐಮಂಗಲ 67, ಅಬ್ಬಿನಹೊಳೆ 44, ಹೊಸದುರ್ಗ 91, ಶ್ರೀರಾಂಪುರ 72, ಚಳ್ಳಕೆರೆ 41, ತಳಕು 34, ನಾಯಕನಹಟ್ಟಿ 40, ಪರಶುರಾಂಪುರ 22, ಮೊಳಕಾಲ್ಮುರು 45 ಒಳಗೊಂಡು ವಿವಿಧೆಡೆ ಸೇರಿ ಒಟ್ಟು 1,034 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net