

ಕುಶಾಲನಗರ : ಕೊಡಗು- ಮೈಸೂರು ಗಡಿ ಭಾಗದ ಚುನಾವಣಾ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದಿರುವ ಕಾರಣ ಅವರೆಲ್ಲರೂ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದಾರೆ.
ಚೆಕ್ ಪೋಸ್ಟ್ ನಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿ ಹಲಗು- ರಾತ್ರಿ ಕಷ್ಟಪಡುವುದೇ ದಿನಚರಿಯಾಗಿದೆ. ಕೊರತೆಗಳ ನಡುವೆಯೇ ಅವರೆಲ್ಲರೂ ತಪಾಸಣೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವುದೇ ಹಿರಿಯ ಅಧಿಕಾರಿಗಳು ಬಂದಾಗ ಸಿಬ್ಬಂದಿ ತಮ್ಮ ಅಹವಾಲು ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಬಿಸಿಲಿನ ತಾಪದ ಜೊತೆಗೆ ವಾಹನಗಳಿಂದ ಬರುವ ಹೊಗೆ ಸಿಬ್ಬಂದಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಶುದ್ಧ ಕುಡಿಯುವ ನೀರು, ಶಾಮಿಯಾನ, ಮಾಸ್ಕ್, ವಿರಾಮಕ್ಕೆ ಕುರ್ಚಿಗಳನ್ನು ಒದಗಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಚೆಕ್‌ಪೋಸ್ಟ್ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ದಿನಕ್ಕೆ ಎರಡು ಬಾರಿ ಯಾವುದಾದರೂ ಪಾನೀಯ ನೀಡಬೇಕು. ಆದರೆ ಯಾವುದೂ ಇಲ್ಲವಾಗಿದೆ. ಶೌಚ ನೀರು ಶುದ್ಧೀಕರಣ ಘಟಕದಿಂದ ಬರುವ ದುರ್ವಾಸನೆಯೇ ಇವರಿಗೆ ಹಿಂಸೆಯಾಗಿದೆ. ಇದನ್ನು ತಡೆಗಟ್ಟಲು ಕುಶಾಲನಗರ ಪುರಸಭೆ ತುರ್ತು ಕ್ರಮ ವಹಿಸಬೇಕು ಎಂಬುದು ಸಿಬ್ಬಂದಿ ಆಗ್ರಹ.