ಅಬಕಾರಿ ನೀತಿ ಉಲ್ಲಂಘನೆಯಲ್ಲಿ 21 ಲಕ್ಷ ರೂ.ಜಪ್ತಿ

media
Visual inspection at Checkposts
Published on

676 ಪ್ರಕರಣ ದಾಖಲು

8 ಕೋಟಿ ರೂ.ಮೌಲ್ಯದ ಅಕ್ರಮ ಮದ್ಯ ವಶ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಜಿಲ್ಲಾ ಅಬಕಾರಿ ಇಲಾಖೆ ಮತದಾನದ ದಿನದವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 20,99,500 ರೂಪಾಯಿ ನಗದು ಜಪ್ತಿ ಮಾಡಿದೆ.
ಅದೇ ರೀತಿ 7,85,39,418 ಕೋಟಿ ರೂ.ಮೌಲ್ಯದ 1,73,995 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಇದರ ಜತೆಗೆ 95,14,600 ಲಕ್ಷ ರೂಪಾಯಿ ಮೌಲ್ಯದ 16.90 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು 676 ಪ್ರಕರಣ ದಾಖಲಿಸಿದೆ. ಇದರೊಂದಿಗೆ ಮತದಾರರಿಗೆ ಹಂಚುವ ಸಲುವಾಗಿ ಸಾಗಿಸುತ್ತಿದ್ದ 3900 ವಿವಿಧ ವಸ್ತುಗಳು ಜಪ್ತಿಯಾಗಿವೆ.
ಚುನಾವಣೆ ವೇಳೆ ಹಣದೊಂದಿಗೆ ಮದ್ಯದ ಹೊಳೆ ಹರಿಸುವ ರಾಜಕೀಯ ಮುಖಂಡರ ಮೇಲೆ ತೀವ್ರ ನಿಗಾವಹಿಸುವಂತೆ ಕೇಂದ್ರ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಅಬಕಾರಿ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅಕ್ರಮ ಮದ್ಯ ವಹಿವಾಟಿಗೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 31 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿತ್ತು. ಚೆಕ್‌ಪೋಸ್ಟ್‌ಗಳಲ್ಲ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ಹಾಗೂ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಚುನಾವಣಾ ಸಿಬ್ಬಂದಿ ಯಶಸ್ವಿಯಾಗಿದ್ದರು. ಆಯಕಟ್ಟಿನ ಜಾಗದಲ್ಲಿ ಚೆಕ್‌ಪೋಸ್ಟ್‌ಗಳು ಇದ್ದಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಅಕ್ರಮ ಮದ್ಯ ಹಾಗೂ ಹಣ ಸಾಗಣೆಗೆ ಅಭ್ಯರ್ಥಿಗಳ ಹಿಂಬಾಲಕರು ಸಾಕಷ್ಟು ಪರದಾಡುವಂತಾಗಿತ್ತು. ಪೊಲೀಸರು ಹಾಗೂ ಅಬಕಾರಿ ಸಿಬ್ಬಂದಿ ಕಣ್ತಪ್ಪಿಸುವುದು ಸುಲಭಸಾಧ್ಯವಿಲ್ಲದ ಕಾರಣ ಅಕ್ರಮಕ್ಕೆ ಸಾಕಷ್ಟು ಕಡಿವಾಣ ಬಿದ್ದಿದೆ ಎನ್ನಲಾಗಿದೆ.
ನಿಯಂತ್ರಣ ಕೊಠಡಿ ಸ್ಥಾಪನೆ: ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೆರೆಯಲಾಗಿದ್ದ ನಿಯಂತ್ರಣ ಕೊಠಡಿಗಳಿಗೆ ಸಾಕಷ್ಟು ಕರೆಗಳು ಬರುತ್ತಿದ್ದವು. ಮಾಹಿತಿ ಖಚಿತಪಡಿಸಿಕೊಂಡು ಕಾರ್ಯಾಚರಣೆಗಳಿದ ಸಿಬ್ಬಂದಿ ಪ್ರಕರಣ ದಾಖಲಿಸಿತ್ತು. ಕೆಲವು ಸಂದರ್ಭದಲ್ಲಿ ಬಂದ ಹುಸಿ ಕರೆಗಳು ಸಿಬ್ಬಂದಿಯನ್ನು ಹೈರಾಣಾಗಿಸಿದ ಪ್ರಕರಣಗಳು ನಡೆದಿವೆ ಎನ್ನಲಾಗಿದೆ. ಆದರೆ ಎಲ್ಲ ಕರೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆಗಳಿಯುತ್ತಿದ್ದರು.
ಗೂಡಂಗಡಿ ಮೇಲೆ ಹದ್ದಿನ ಕಣ್ಣು: ಚುನಾವಣೆ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಗೂಡಂಗಡಿಗಳು ಅಕ್ರಮ ಮದ್ಯ ಮಾರಾಟದ ಕೇಂದ್ರ ಸ್ಥಾನವಾಗಿ ಕೆಲಸ ಮಾಡುವುದು ಗುಟ್ಟಾಗಿ ಉಳಿದಿಲ್ಲ. ನಗರ ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿನ ಇಂಥ ಅಂಗಡಿಗಳೇ ಅಕ್ರಮ ಮದ್ಯ ಮಾರಾಟದ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಂಡಿವೆ ಈ ಹಿನ್ನೆಲೆಯಲ್ಲಿ ಈ ಬಾರಿ ಅಬಕಾರಿ ಸಿಬ್ಬಂದಿ ಇಂಥ ಗೂಡಂಗಡಿಗಳ ಮೇಲೆ ಹದ್ದಿನ ಕಣ್ಣು ನೆಟ್ಟಿತ್ತು. ಸರದಿಯಂತೆ ಗ್ರಾಮೀಣ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದರಿಂದ ಗೂಡಂಗಡಿ ಮಾಲೀಕರು ಈ ಬಾರಿ ಅಕ್ರಮ ಮದ್ಯ ಮಾರಾಟದ ಉಸಾಬರಿಗೆ ಹೋಗಿರಲಿಲ್ಲ ಎನ್ನಲಾಗಿದೆ.


ಅಬಕಾರಿ ನೀತಿ ಉಲ್ಲಂಘನೆಯಲ್ಲಿ ಮತದಾನದ ದಿನದವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 21 ಲಕ್ಷ ರೂ.ನಗದು ಜಪ್ತಿ ಮಾಡಲಾಗಿದೆ. 8 ಕೋಟಿ ರೂ.ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು, 676 ಪ್ರಕರಣ ದಾಖಲಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆಯಲ್ಲಿ ಕೆಲವೊಂದು ನಗದು ಹಾಗೂ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ ಅಲ್ಲದೆ ಸಹಾಯವಾಣಿಗೆ ಬಂದ ಕರೆ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆ ಹಾಗೂ ದಿಢೀರ್ ದಾಳಿಗಳಿಂದಲೂ ಪ್ರಕರಣಗಳು ಸಿಕ್ಕಿಬಿದ್ದಿವೆ.
ನಾರಾಯಣ, ಅಬಕಾರಿ ಸೂಪರಿಡಿಡೆಂಟ್ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net