

ಅಕ್ಕಿಆಲೂರ: ಕಳಪೆ ಬೀಜದಿಂದ ಮೆಣಸಿನಕಾಯಿ ಬೆಳೆ ಬೆಳೆದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಶೀಗಿಹಳ್ಳಿ ಗ್ರಾಮದ ರೈತರ ಹೊಲಗಳಿಗೆ ತೋಟಗಾರಿಕೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೀಗಿಹಳ್ಳಿ ಗ್ರಾಮದ ಶಿವಪುತ್ರಪ್ಪ ಉಳ್ಳಾಗಡ್ಡಿ, ಲೋಕಪ್ಪ ಉಪ್ಪಣಸಿ, ವೀರೇಶ ಉಪ್ಪಣಸಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಕುಮಾರ ಉಪ್ಪಣಸಿ, ರವಿ ಉಳ್ಳಾಗಡ್ಡಿ, ಮತ್ತಿತರ ರೈತರು ಬೆಳೆದಿದ್ದ ಮೆಣಸಿನಕಾಯಿ ಬೆಳೆ ಸಂಪೂರ್ಣ ನೆಲಕಚ್ಚಿತ್ತು. ಹೀಗಾಗಿ, ಬೀಜ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಮೆಣಸಿನಕಾಯಿ ಬೆಳೆಗೆ ತಗುಲಿದ ರೋಗ, ಕೀಟ ಬಾಧೆ, ಬೆಳೆಗಳ ಸಮಗ್ರ ಬೆಳವಣಿಗೆ, ರೈತರು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದ ವಿಜ್ಞಾನಿಗಳು, ದೀರ್ಘಕಾಲದ ಮಣ್ಣು ಪರಿಶೀಲನೆ ನಡೆಸಿದರು. ರಾಜ್ಯದ ವಿವಿಧೆಡೆ ಮಾರಾಟವಾಗಿರುವ ಅನೇಕ ಕಂಪನಿಗಳ ಮೆಣಸಿನಕಾಯಿ ಬೀಜ ಮತ್ತು ಶೀಗಿಹಳ್ಳಿ ಗ್ರಾಮದ ರೈತರು ಬಿತ್ತನೆ ಮಾಡಿರುವ ಬೀಜಗಳ ವ್ಯತ್ಯಾಸವನ್ನು ವಿಜ್ಞಾನಿಗಳು ಗಮನಿಸಿದರು. ಇದಕ್ಕೂ ಮುನ್ನ ಹಾನಗಲ್ಲ, ಮತ್ತಿತರ ಕಡೆ ಮೆಣಸಿನಕಾಯಿ ಬೆಳೆ ಬಾರದಿರುವ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದರು.
ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಜ್ಞಾನಿ ಡಾ. ಶಾಂತಪ್ಪ, ದೇವಿಹೊಸೂರಿನ ಮೆಣಸಿನಕಾಯಿ ಬೆಳೆಗಳ ತಜ್ಞ ಡಾ. ಪ್ರಭುದೇವ ಅಜ್ಜಪ್ಪಳವರ, ಬೆಳೆಗಳ ರೋಗ ತಜ್ಞ ಡಾ. ರವಿಕುಮಾರ, ಕೀಟ ತಜ್ಞ ಡಾ. ವಿನಯಕುಮಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ, ಸರಸ್ವತಿ ಕಬ್ಬೂರ, ರುದ್ರಪ್ಪ ಬಳಿಗಾರ ಇತರರು ಉಪಸ್ಥಿತರಿದ್ದರು.
ನಾವು ಪ್ರಾಥಮಿಕವಾಗಿ ಗಮನಿಸಿದ ಪ್ರಕಾರ ಮೆಣಸಿನಕಾಯಿ ತಳಿಯ ಬೆಳವಣಿಗೆ ಸರಿ ಇಲ್ಲ. ಯಾವುದೇ ಬೀಜಗಳ ಪ್ಯಾಕೆಟ್ ಮೇಲೆ ಬೆಳೆಗಳ ಕಾಲಮಾನ ಮತ್ತು ಅವಧಿಯ ಬಗ್ಗೆ ಉಲ್ಲೇಖ ಇರಬೇಕು, ಆದರೆ, ಶೀಗಿಹಳ್ಳಿ ರೈತರು ಬಿತ್ತನೆ ಮಾಡಿದ ಮೆಣಸಿನಕಾಯಿ ಬೀಜಗಳ ಪ್ಯಾಕೆಟ್ ಮೇಲೆ ಯಾವುದೆ ಉಲ್ಲೇಖವಿಲ್ಲ. ಮಣ್ಣು, ಬೀಜ, ತಳಿ, ನೀರು ಎಲ್ಲವನ್ನೂ ಪರೀಕ್ಷೆಗೆ ತೆಗೆದುಕೊಂಡಿದ್ದೇವೆ. ಸಂಶೋಧನೆ ಮತ್ತು ಸಮಾಲೋಚನೆ ನಡೆಸಿದ ನಂತರ ವರದಿ ನೀಡುತ್ತೇವೆ. | ಡಾ. ಶಾಂತಪ್ಪ ಬಾಗಲಕೋಟೆ ಕೃಷಿ ವಿವಿ ತೋಟಗಾರಿಕೆ ವಿಜ್ಞಾನಿ