ಕಾನೂನು ತಜ್ಞರೊಂದಿಗೆಪರಿಶೀಲಿಸಿ, ಸೂಕ್ತ ನಿರ್ದೇಶನ ಭರವಸೆ

SIRSI HKP
Published on

ಶಿರಸಿ: ವಿವಿಧ ಅರಣ್ಯ ಹಕ್ಕು ಸಮಿತಿಗಳು ಪಾರಂಪರಿಕ ಅರಣ್ಯವಾಸಿಗಳಿಗೆ 1930ರ ಪೂರ್ವದ ಮೂರು ತಲೆಮಾರಿನ ವೈಯಕ್ತಿಕ ದಾಖಲೆಯನ್ನು ಅರಣ್ಯ ಹಕ್ಕು ಕಾಯ್ದೆಯಲ್ಲಿ ಅಪೇಕ್ಷಿಸುವುದನ್ನು ಉನ್ನತ ಮಟ್ಟದ ಕಾನೂನು ತಜ್ಞರೊಂದಿಗೆ ರ್ಚಚಿಸಿ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ತಮ್ಮನ್ನು ಗುರುವಾರ ಭೇಟಿ ಮಾಡಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಅವರೊಂದಿಗೆ ಚರ್ಚೆಯ ವೇಳೆ ಈ ಭರವಸೆ ನೀಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಪಾರಂಪರಿಕ ಅರಣ್ಯವಾಸಿಗಳು ಸಲ್ಲಿಸಿದ ಅರ್ಜಿಯ ಮರುಪರಿಶೀಲನೆ ಪ್ರಕ್ರಿಯೆಯಲ್ಲಿ ವಿವಿಧ ಅರಣ್ಯ ಹಕ್ಕು ಸಮಿತಿಗಳು ವೈಯಕ್ತಿಕ ಮೂರು ತಲೆಮಾರಿನ ದಾಖಲೆಗಳನ್ನು ಅಪೇಕ್ಷಿಸಿ ಕಾನೂನು ಬಾಹಿರವಾಗಿ ತಿಳಿವಳಿಕೆ ಪತ್ರ ನೀಡುತ್ತಿರುವುದರಿಂದ ಅರಣ್ಯವಾಸಿಗಳಿಗೆ ಗೊಂದಲಕ್ಕೆ ಕಾರಣವಾಗಿದೆ. 1930ರ ಕ್ಕಿಂತ ಹಿಂದಿನ ದಾಖಲೆಗಳನ್ನು ಸಾಗುವಳಿ ಹಕ್ಕಿಗೆ ಸಂಬಂಧಿಸಿ ಅಪೇಕ್ಷಿಸುವುದು ಸಮಂಜಸವಲ್ಲ. ಸ್ಥಳೀಯ ಸಂಸ್ಥೆ, ಸರ್ಕಾರ, ಇಲಾಖೆಯ ಅಸ್ತಿತ್ವ, ಸ್ವತಂತ್ರ ದೇಶದ ಕಾನೂನುಗಳು ಅಸ್ತಿತ್ವವಿಲ್ಲದ ಹಿಂದಿನ ದಾಖಲೆ ಒತ್ತಾಯಿಸುವುದು ಕಾನೂನು ಬಾಹಿರ ಎಂದು ಅವರು ತಿಳಿಸಿದ್ದಾರೆ. ಕಾನೂನನ್ನು ತಪ್ಪಾಗಿ ಅರ್ಥೈಸಿ, ಕಾನೂನಿಗೆ ವ್ಯತಿರಿಕ್ತವಾಗಿ ವೈಯಕ್ತಿಕ ನಿರ್ದಿಷ್ಟ ದಾಖಲೆಗೆ ನೋಟಿಸ್ ಕೊಡುವ ನೀತಿಯನ್ನು ಹಿಂದಕ್ಕೆ ಪಡೆಯುವಂತೆ ವಿವಿಧ ಕಾನೂನುಗಳ ಅಂಶಗಳ ಉಲ್ಲೇಖವನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net