

ಚಿಕ್ಕಮಗಳೂರು: ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುವ ಆ ರಾಜ್ಯದ ವಾಹನಗಳ ಮೇಲೆ ನಿಗಾ ಇಡಬೇಕೆಂದು ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಕೇರಳದಿಂದ ಬರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಯಾಕಾಗಿ ಬರುತ್ತಿದ್ದಾರೆ, ಹೋಂಸ್ಟೇ-ರೆಸಾರ್ಟ್‍ಗಳಲ್ಲಿ ಉಳಿಯುತ್ತಿದ್ದಾರೆಯೇ, ಧಾರ್ಮಿಕ ಕೇಂದ್ರಗಳಿಗೆ ಬರುತ್ತಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಬೇಕು. ಇಲ್ಲಿ ಬೇರೆ ಬೇರೆ ರೀತಿಯ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮೊದಲಿನಿಂದಲೂ ದೂರುಗಳಿರುವ ಹಿನ್ನೆಲೆಯಲ್ಲಿ ಗಡಿಗಳಲ್ಲಿ ತಪಾಸಣೆ ನಡೆಸಬೇಕು ಎಂದು ಹೇಳಿದರು.
ಎಸ್ಪಿ ಎಂ.ಎಚ್.ಅಕ್ಷಯ್ ಮಾತನಾಡಿ, ಹೊರ ರಾಜ್ಯದ ವಾಹನಗಳ ನಿರ್ಬಂಧಕ್ಕೆ ಸರ್ಕಾರದಿಂದ ಸದ್ಯ ಯಾವುದೇ ನಿರ್ದೇಶನಗಳಿಲ್ಲ. ಆದರೂ ಕರೊನಾ ತಪಾಸಣೆಗೆ ಒಳಪಡಿಸುವುದಲ್ಲದೆ ಬೇರೇನಾದರೂ ಚಟುವಟಿಕೆ ನಡೆಯುತ್ತಿವೆಯೇ ಎನ್ನುವುದರ ಕುರಿತು ಪರಿಶೀಲಿಸಿ ಜಿಲಾಧಿಕಾರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕರೊನಾ ಲಾಕ್‍ಡೌನ್ ಬಳಿಕ ನಗರಕ್ಕೆ ಕೇರಳದ ಪ್ರವಾಸಿಗರು ಬಸ್‍ಗಳಲ್ಲಿ ಬರುತ್ತಿಲ್ಲ. ಕೇವಲ ಕಾರುಗಳು ಬರುತ್ತಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರಪ್ಪ ಶಿರೋಳ್ಕರ್ ತಿಳಿಸಿದರು.
ಮೆಸ್ಕಾಂ ಅಧಿಕಾರಿಗಳಿಗೆ ತರಾಟೆ:
ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದು, ಸ್ಥಳಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಇದಕ್ಕೆ ತರೀಕೆರೆ ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ ಧ್ವನಿಗೂಡಿಸಿ, ಎರಡು ವರ್ಷಗಳ ಹಿಂದೆಯೇ ಹೆದ್ದಾರಿ ವಿಸ್ತರಣೆ ಘೋಷಣೆಯಾಗಿದೆ ಎಂದರು. ಇದರಿಂದ ಸಿಟ್ಟಾದ ಸಂಸದೆ, ಹೆದ್ದಾರಿ ವಿಸ್ತರಣೆ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಸೂಕ್ತ ಅಂತರದಲ್ಲಿ ವಿದ್ಯುತ್ ಕಂಬ ಅಳವಡಿಸಬೇಕೆಂಬ ಸಾಮಾನ್ಯ ಜ್ಞಾನವಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಸಂಸದೆ ಶೋಭಾ ಕರಂದ್ಲಾಜೆ, ಅವೈಜ್ಞಾನಿಕ ಕ್ರಮ ಕೈಗೊಂಡಿರುವ ಮೆಸ್ಕಾಂ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಜಿಲಾಧಿಕಾರಿಗೆ ನಿರ್ದೇಶನ ನೀಡಿದರು.
ಜನಸಂಪರ್ಕ ಸಭೆಗೆ ಆಹ್ವಾನಿಸಿ:
ಜನಸಂಪರ್ಕ ಸಭೆಗೆ ನನಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ತಾಲೂಕಿನ ಸಂಬಂಧಿಸಿದ ಅಧಿಕಾರಿಯನ್ನು ಪ್ರಶ್ನಿಸಿದಾಗ ಜನಪ್ರತಿನಿಧಿಗಳನ್ನು ಆಹ್ವಾನಿಸಬಾರದು ಎಂದು ಸೂಚನೆ ಇದೆ ಎಂಬುದಾಗಿ ಅಧಿಕಾರಿ ಉತ್ತರಿಸಿದ್ದಾರೆ. ಹಾಗೇನಾದರೂ ಸೂಚನೆ ಹೊರಡಿಸಲಾಗಿದೆಯೇ ಎಂದು ಶಾಸಕ ಡಿ.ಎಸ್.ಸುರೇಶ್ ಜಿಪಂ ಸಿಇಒ ಅವರನ್ನು ಪ್ರಶ್ನಿಸಿದರು. ಈ ರೀತಿ ಯಾವುದೇ ಸೂಚನೆ ನೀಡಿಲ್ಲ ಎಂದು ಸಿಇಒ ಎಸ್.ಪೂವಿತಾ ತಿಳಿಸಿದರು.
ಜನರೇ ಇರುವುದಿಲ್ಲ:
ಶೃಂಗೇರಿ ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಮಾತನಾಡಿ, ಮೆಸ್ಕಾಂ ಜನಸಂಪರ್ಕ ಸಭೆಗಳಲ್ಲಿ ಜನರೇ ಇರುವುದಿಲ್ಲ. ಎರಡು, ಮೂರು ಜನರಿದ್ದರೆ ಅದು ಜನಸಂಪರ್ಕ ಸಭೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಮೆಸ್ಕಾಂ ಕಾರ್ಯವೈಖರಿ ಬಗ್ಗೆ ಸಾಕಷ್ಟು ದೂರುಗಳಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸಂಸದೆ ನಿರ್ದೇಶನ ನೀಡಿದರು. ಜನಸಂಪರ್ಕ ಸಭೆಗಳನ್ನು ನಡೆಸುವಾಗ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡಬೇಕು. ಕೇವಲ ನಿಮ್ಮದೇ ಸಾಮ್ರಾಜ್ಯ ಆಗಬಾರದು ಎಂದು ಅಧಿಕಾರಿಗಳಿಗೆ ಹೇಳಿದರು.
ಸಮುದಾಯ ತಡೆಗೋಡೆ ನಿರ್ಮಿಸಿ:
ಮಳೆ ನೀರು ನುಗ್ಗದಂತೆ ಶೃಂಗೇರಿ ಸೇರಿದಂತೆ ಮಲೆನಾಡು ತಾಲೂಕುಗಳಲ್ಲಿ ತಡೆಗೋಡೆ ನಿರ್ಮಿಸಲು ನಾಲ್ಕೈದು ಮನೆಗಳನ್ನು ಸೇರಿಸಿ ಸಮುದಾಯ ತಡೆಗೋಡೆ ಎಂದು ಪರಿಗಣಿಸಿ ಎನ್‍ಆರ್‍ಇಜಿ ಅಡಿಯಲ್ಲಿ ಕಾಮಗಾರಿ ನಿರ್ವಹಿಸಲು ಅನುಮತಿ ನೀಡಿ ಎಂದು ಜಿಪಂ ಸಿಇಒ ಅವರಿಗೆ ಶೋಭಾ ಕರಂದ್ಲಾಜೆ ಸೂಚಿಸಿದರು.
ತರೀಕೆರೆ ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸುವ ಸಾಮಾಜಿಕ ಲೆಕ್ಕ ಪರಿಶೋಧಕರಿಗೆ ಕನಿಷ್ಠ ವಿದ್ಯಾರ್ಹತೆ ಇರುವುದಿಲ್ಲ. ಸರ್ಕಾರದ ನಿರ್ದೇಶನ ಮಾತ್ರ ಮುಂದಿಟ್ಟುಕೊಂಡು ಕ್ರಮ ಕೈಗೊಳ್ಳುತ್ತಾರೆ. ಅವರು ದಿನಗೂಲಿ ಆಧಾರದಲ್ಲಿ ನೇಮಕಗೊಂಡ ಎನ್‍ಜಿಒಗಳ ಸದಸ್ಯರು. ಕಾಮಗಾರಿಗಳ ಕುರಿತು ಯಾವುದೇ ಜ್ಞಾನ ಇರುವುದಿಲ್ಲ. ಇಂಜಿನಿಯರ್‍ಗಳು ಮಾಡಿದ ಕಾಮಗಾರಿಗೆ ಇವರು ಬಂದು ಟೇಪು ಹಿಡಿಯುತ್ತಾರೆ. ಒಂದು ಲಕ್ಷ ರೂ. ವೆಚ್ಚದ ಕೆಲಸ ಮಾಡಿದರೆ ಒಂದು ಲಕ್ಷ ರೂ. ವಸೂಲಿಗೆ ಹಾಕುತ್ತಾರೆ ಎಂದು ಆಕ್ಷೇಪಿಸಿದರು. ಸಿಇಒ ಪೂವಿತಾ ಪ್ರತಿಕ್ರಿಯಿಸಿ, ಸಾಮಾಜಿಕ ಲೆಕ್ಕ ಪರಿಶೋಧನೆ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೆ ಅದನ್ನು ಸರಿಪಡಿಸಲು ತಾಪಂ ಇಒ ನೇತೃತ್ವದ ಸಮಿತಿಯಲ್ಲಿ ಸರಿಪಡಿಸಲು ಅವಕಾಶವಿದೆ ಎಂದು ತಿಳಿಸಿದರು.
ಫಲಾನುಭವಿಗಳಿಗೆ ಮತ್ತೆ ಪರಿಹಾರ ನೀಡಲ್ಲ:
ಕಳೆದ ವರ್ಷದ ಅತಿವೃಷ್ಟಿಯಿಂದ ನಿರಾಶ್ರಿತರಾದವರಿಗೆ ಕಳಸದಲ್ಲಿ ನಿರ್ಮಿಸಲಾಗಿರುವ 355 ಮನೆಗಳು ಖಾಲಿ ಬಿದ್ದಿವೆ ಎಂದು ಉಪ ವಿಭಾಗಾಧಿಕಾರಿ ಡಾ. ಎಚ್.ಆರ್.ನಾಗರಾಜ್ ಸಭೆಗೆ ತಿಳಿಸಿದರು. ಈ ಫಲಾನುಭವಿಗಳನ್ನು ಎ.ವರ್ಗಕ್ಕೆ ಸೇರಿದವರೆಂದು ಗುರುತಿಸಿ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ ಅವರು ಅಪಾಯಕಾರಿ ಸ್ಥಳದಲ್ಲೇ ಇದ್ದಾರೆ. ಈ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದೆ ಬಾರದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಸಿ.ದರ್ಜೆಗೆ ವರ್ಗಾಯಿಸಿ ಅವರು ಪಡೆದ ಒಂದು ಲಕ್ಷ ರೂ. ಪರಿಹಾರದಲ್ಲಿ 50 ಸಾವಿರ ರೂ. ವಸೂಲಿ ಮಾಡಬೇಕೆಂದು ರಾಜೀವ್ ಗಾಂಧಿ ವಸತಿ ನಿಗಮ ಆದೇಶ ಹೊರಡಿಸಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ಅನಾಹುತ ಮರುಕಳಿಸಿ ಮತ್ತೊಮ್ಮೆ ನಿರಾಶ್ರಿತರಾದರೆ ಪುನಃ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಬಾರದಷ್ಟೆ ಎಂದರು.
ಇಎಸ್‍ಐ ಮಂಜೂರು ಮಾಡಿಸಲು ಕ್ರಮ:
ಕಾಫಿ ತೋಟದ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ವಲಯಕ್ಕೆ ಸೇರಿಸಿದಲ್ಲಿ ಜಿಲ್ಲೆಗೆ ಇಎಸ್‍ಐ ಆಸ್ಪತ್ರೆ ಮಂಜೂರು ಮಾಡಿಸಲು ಅನುಕೂಲವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಕಾಫಿ ತೋಟದ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ವಲಯಕ್ಕೆ ಸೇರಿಸಲು ಕೇಂದ್ರ ಕಾರ್ಮಿಕ ಇಲಾಖೆ ಅನುಮತಿ ನೀಡಿದೆ. ಇದಕ್ಕೆ ಪೂರಕವಾಗಿ ತಕ್ಷಣ ಎಲ್ಲ ಕಾರ್ಮಿಕರನ್ನು ಈ ವ್ಯಾಪ್ತಿಗೆ ತಂದಲ್ಲಿ ಶೀಘ್ರ ಇಎಸ್‍ಐ ಆಸ್ಪತ್ರೆ ಮಂಜೂರು ಮಾಡಿಸಲಾಗುವುದು ಎಂದರು.
ಸ್ಪೈಸಸ್ ಪಾರ್ಕ್ ಗೆ ಜಾಗ:
ಸ್ಪೈಸಸ್ ಪಾರ್ಕ್ ಗೆ ನಗರದ ಅಂಬಳೆ ಹೋಬಳಿ ಹೊಸಕೋಟೆ ಗ್ರಾಮದಲ್ಲಿ 10 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಅದಕ್ಕೆ ಕೆಐಎಡಿಬಿಯು ಮಾರುಕಟ್ಟೆ ಮೌಲ್ಯದಲ್ಲಿ ಹಣ ಒದಗಿಸಲು ಕೇಳಿದೆ. ಆದರೆ ಅದು ಸರ್ಕಾರದ್ದೇ ಯೋಜನೆ ಆಗಿರುವ ಕಾರಣ ಹಣ ನೀಡಲು ಸಾಧ್ಯವಿಲ್ಲ. ಜಾಗ ಮಂಜೂರಾತಿ ಮಾಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ರಮೇಶ್ ಅವರಿಗೆ ಸಂಸದೆ ತಿಳಿಸಿದರು.
ಚಿಕಿತ್ಸೆಯಲ್ಲಿ 20 ಸೋಂಕಿತರು:
ಜಿಲ್ಲೆಯಲ್ಲಿ ಈವರೆಗೆ 2,67,886 ಕರೊನಾ ತಪಾಸಣೆ ನಡೆಸಲಾಗಿದ್ದು, 13,973 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 9588 ಮಂದಿ ಹೋಂ ಐಸೋಲೇಷನ್ ಹಾಗೂ 4385 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಟ್ಟು 13814 ಮಂದಿ ಬಿಡುಗಡೆಯಾಗಿದ್ದಾರೆ. ಇದೀಗ 20 ಸೋಂಕಿತರಿದ್ದು, ಇದುವರೆಗೆ 139 ಮಂದಿ ಸಾವಿಗೀಡಾಗಿದ್ದಾರೆ. 3ನೇ ಹಂತದ ಲಸಿಕೆ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಮೂರು ಹಂತದಲ್ಲೂ ಅಡ್ಡ ಪರಿಣಾಮ ಕಂಡು ಬಂದಿಲ್ಲ ಎಂದು ಆರೋಗ್ಯಾಧಿಕಾರಿ ಡಾ. ಅಶ್ವತ್ಥ ಬಾಬು ಸಭೆಗೆ ತಿಳಿಸಿದರು. ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಸಭೆಯಲ್ಲಿದ್ದರು.