

ಎನ್.ಆರ್.ಪುರ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಜಲ ಜೀವನ್ ಮಿಷನ್ ಯೋಜನೆಯಡಿ ಆಗಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಎಲ್ಲ ಮನೆಗಳಿಗೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ಖಾತರಿ ಪಡಿಸಿಕೊಂಡ ನಂತರ ಕಾಮಗಾರಿ ಹಸ್ತಾಂತರಿಸಿಕೊಳ್ಳುವಂತೆ ತಾಪಂ ಆಡಳಿತಾಧಿಕಾರಿ ಎಲ್.ನಂದೀಶ್ ಪಿಡಿಒಗಳಿಗೆ ಸೂಚಿಸಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ವಹಿಸಿರುವ ಪೈಪ್‌ಲೈನ್ ಕಾವಗಾರಿಗಳಿಗೆ ಡಾಂಬರ್ ಹಾಗೂ ಕಾಂಕ್ರಿಟ್ ರಸ್ತೆಗಳನ್ನು ಅಗೆಯಲಾಗಿದೆ. ಅದನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ವೀರಭದ್ರಪ್ಪ ಅವರಿಗೆ ಸೂಚಿಸಿದರು.
ಎಇಇ ವೀರಭದ್ರಪ್ಪ ಮಾತನಾಡಿ, ಜಲಜೀವನ ಮಿಷನ್ ಯೋಜನೆಯ ಮೊದಲ ಹಂತದ 14 ಕಾಮಗಾರಿಗಳು ಪೂರ್ಣಗೊಂಡಿದ್ದು, ಆರು ಕಾಮಗಾರಿಗನ್ನು ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಕಾನೂರು ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಪೈಪ್‌ಲೈನ್ ಕಾಮಗಾರಿ ಸರಿಯಾಗಿಲ್ಲ ಎಂದು ಪಿಡಿಒ ಶ್ರೀನಿವಾಸ್ ದೂರಿದರು. ನಾಗಲಾಪುರ ಗ್ರಾಪಂನಲ್ಲೂ ಎಂಟು ಮನೆಗಳಿಗೆ ನೀರು ಬರುತ್ತಿಲ್ಲ ಎಂದು ಪಿಡಿಒ ಪ್ರೇಮಕುಮಾರ್ ಸಭೆಗೆ ತಿಳಿಸಿದರು.
ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಒಂದು ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಅದನ್ನು ಹಾಗೆ ಬಿಡದೆ ನೀರಿನ ಇಳುವರಿ ಇರುವ ಸಮೀಪದ ಇನ್ನೊಂದು ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡಿಕೊಂಡು ನೀರು ಪೂರೈಸಬೇಕು. ನೀರು ಕಡಿಮೆ ಇದೆ ಎಂದು ಪೈಪ್‌ಲೈನ್ ಹಾಗೂ ಸಿಸ್ಟನ್‌ನ್ನು ಹಾಗೆಯೇ ಬಿಡುವಂತಿಲ್ಲ . ಮೊದಲು ನೀರಿನ ಮೂಲ ಕಂಡುಹಿಡಿದು ನಂತರ ಉಳಿದ ಕಾಮಗಾರಿ ಮಾಡಬೇಕು. ಕೆಲವೆಡೆ ಮೊದಲೇ ಪೈಪ್‌ಲೈನ್ ಕಾಮಗಾರಿಗಳಾಗಿ, ನಂತರ ನೀರಿನ ಮೂಲ ಇಲ್ಲದೆ ಪೈಪ್‌ಲೈನ್ ಹಾಗೆಯೇ ಉಳಿದಿದೆ ಈ ಬಗ್ಗೆ ಕಳೆದ ಸಭೆಯಲ್ಲಿಯೇ ಸೂಚಿಸಲಾಗಿದೆ ಎಂದರು.
ಈಗ ಮೊದಲು ನೀರಿನ ಮೂಲವನ್ನು ಕಂಡು ಹಿಡಿದೇ ನಂತರ ಪೈಪ್‌ಲೈನ್, ಓವರ್ ಹೆಡ್ ಟ್ಯಾಂಕ್ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಎಇಇ ವೀರಭದ್ರಪ್ಪ ತಿಳಿಸಿದರು.