

ನೆಲಮಂಗಲ: ನಗರದ ಎಸ್ಸಿ, ಎಸ್ಟಿ, ಬಿಸಿಎಂ ಸೇರಿ ಅಲ್ಪಸಂಖ್ಯಾತ ವಿದ್ಯಾರ್ಥಿ ವಸತಿ ನಿಲಯಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ್ದ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಕುಮಾರ್ ಪರಿಶೀಲನೆ ನಡೆಸಿದರು.
ಮೊದಲಿಗೆ ನಗರದ ಜಯನಗರದ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿನಿಯರ ವಸತಿ ಕೋಣೆಗಳು, ಅಡುಗೆ ಕೋಣೆಗಳ ವ್ಯವಸ್ಥೆಗಳನ್ನು ಪರಿಶೀಲಿಸಿದ ಶಿವಕುಮಾರ್, ಕೋಣೆಗಳಲ್ಲಿ ಸ್ವಚ್ಛತೆ, ಮೂಲಸೌಕರ್ಯ ಹಾಗೂ ಅಡುಗೆ ಕೋಣೆ ಆಹಾರ ಪದಾರ್ಥಗಳನ್ನು ಮತ್ತು ಆಹಾರ ಸಂಗ್ರಹಣಾಲಯ ಪರಿಶೀಲಿಸಿದರು.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಗ್ರಂಥಾಲಯ, ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಯಾವುದೇ ರೀತಿಯ ತೊಂದರೆಗಳಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಅಧಿಕಾರಿಗಳಿಗೆ ಎಚ್ಚರಿಕೆ: ನಿಲಯದಲ್ಲಿ ಹಾಜರಾತಿ ಪುಸ್ತಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು, ಸ್ವಚ್ಛತೆ ಕಾಪಾಡಬೇಕು. ತಾಲೂಕು ಬಿಸಿಎಂ ಅಧಿಕಾರಿಗಳು ಕಾಲಕಾಲಕ್ಕೆ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಪೌಷ್ಟಿಕ ಆಹಾರ ನೀಡಬೇಕು. ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದ್ದು ಸದುಪಯೋಗವಾಗಬೇಕು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಕುಮಾರ್ ಸೂಚಿಸಿದರು.
ವಿದ್ಯಾರ್ಥಿಗಳೊಂದಿಗೆ ಚರ್ಚೆ ಹಾಗೂ ಸಂವಾದ ನಡೆಸಿದ ಶಿವಕುಮಾರ್, ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಿರ್ದಿಷ್ಟ ಗುರಿ ಹಾಗೂ ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಂದ ಮನವಿ
ವಿದ್ಯಾರ್ಥಿ ನಿಲಯಕ್ಕೆ ಕ್ರೀಡಾ ಸಾಮಾಗ್ರಿಗಳ ಕಿಟ್ ಒದಗಿಸಬೇಕು, ಶುದ್ಧ ಕುಡಿಯುವ ನೀರಿನ ಆರ್‌ಒ ಪ್ಲ್ಯಾಂಟ್ ನಿರ್ಮಾಣ, ಗ್ರಂಥಾಲಯಕ್ಕೆ ಪುಸ್ತಕ ಪೂರೈಕೆ ಸೇರಿ ಇನ್ನಿತರ ಸೌಕರ್ಯ ಕಲ್ಪಿಸುವಂತೆ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಕುಮಾರ್‌ಗೆ ವಿದ್ಯಾರ್ಥಿಗಳು ಮನವಿ ಮಾಡಿದರು. ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಮಾಡಿರುವ ಕೆಲ ಮನವಿಯನ್ನು ಅದಷ್ಟು ಬೇಗ ಬಗೆಹರಿಸಲಾಗುವುದು. ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಶಾಶ್ವತ ಪರಿಹಾರ ಒದಗಿಸುವುದಾಗಿ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಎಲ್ಲಿಲ್ಲಿಗೆ ಭೇಟಿ?
ನಗರದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ, ಜಯನಗರ ಬಿಸಿಎಂ ವಿದ್ಯಾರ್ಥಿ ನಿಲಯ, ದಾಬಸ್ ಪೇಟೆ, ಎಲೆ ಕ್ಯಾತನಹಳ್ಳಿ, ಬೈರನಾಯಕನಹಳ್ಳಿ, ನರಸೀಪುರ, ಬೈರನಾಯಕನಹಳ್ಳಿಯ ಕಿತ್ತೂರುರಾಣಿ ವಸತಿ ಶಾಲೆಗೆ ಭೇಟಿ ನೀಡಿ ಶಿವಕುಮಾರ್ ಪರಿಶೀಲನೆ ನಡೆಸಿದರು. ಬಳಿಕ ವಿದ್ಯಾರ್ಥಿ ನಿಯಲದಲ್ಲಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನ ಉಪಹಾರ ಸೇವಿಸಿದರು.