ವಿದ್ಯುತ್ ಶುಲ್ಕ ಹೆಚ್ಚು ವಿಧಿಸುವುದನ್ನು ಪರಿಶೀಲಿಸಿ

13ark1
ಅರಕಲಗೂಡಿನಲ್ಲಿ ಗುರುವಾರ ಆಯೋಜಿಸಿದ್ದ ಸೆಸ್ಕ್ ಇಂಜಿನಿಯರ್‌ಗಳ ಸಭೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ಗೌಡ ಮಾತನಾಡಿದರು. ಶೇಖರ್ ಇದ್ದರು.
Published on

ಅರಕಲಗೂಡು: ಗೃಹಜ್ಯೋತಿ ಗ್ಯಾರಂಟಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಕೆಲ ಕುಟುಂಬಗಳಿಗೆ ಹೆಚ್ಚು ಶುಲ್ಕ ವಿಧಿಸುತ್ತಿರುವ ಕುರಿತು ಮೀಟರ್‌ಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.ಶ್ರೀಧರ್‌ಗೌಡ ಸೆಸ್ಕ್ ಇಂಜಿನಿಯರ್‌ಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸೆಸ್ಕ್ ಇಂಜಿನಿಯರ್‌ಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಡಿ ಶೇ. 99.45ರಷ್ಟು ಪ್ರಗತಿ ಸಾಧಿಸಿದ್ದು ಇನ್ನುಳಿದ ಬೆರಳೆಣಿಕೆಯಷ್ಟು ಕುಟುಂಬಗಳು ಕಾರಣಾಂತರಗಳಿಂದ ಹೊರಗುಳಿದಿವೆ. ಇಂತಹ ಮನೆಗಳಿಗೆ ಯೋಜನೆ ಸೌಲಭ್ಯ ದೊರಕಿಸಿಕೊಡಬೇಕು ಎಂದು ಹೇಳಿದರು.

ಎಲ್ಲ ಏಳು ಉಪ ವಿಭಾಗಗಳ ಇಂಜಿನಿಯರ್‌ಗಳು ಹೆಚ್ಚು ಶುಲ್ಕ ವಿಧಿಸುತ್ತಿರುವ ಮೀಟರ್‌ಗಳನ್ನು ಖುದ್ದು ಪರಿಶೀಲಿಸಿ ಮುಂದಿನ ಸಭೆ ವೇಳೆಗೆ ಸಮಸ್ಯೆ ನಿವಾರಿಸಬೇಕು. ಗ್ಯಾರಂಟಿ ಯೋಜನೆಯ ಲಾಭ ಪಡೆದು ಕೆಲವರು ಅಪಪ್ರಚಾರ ನಡೆಸುತ್ತಿದ್ದು ಇದರಿಂದ ಕೋಟಿಗಟ್ಟಲೆ ಹಣ ವ್ಯಯಿಸುತ್ತಿರುವ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಲಿದೆ. ಗ್ಯಾರಂಟಿ ಯೋಜನೆಯಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಅಧಿಕಾರಿಗಳು ಜನಜಾಗೃತಿ ಮೂಡಿಸಬೇಕು ಎಂದರು.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಕಾಡದಂತೆ ನಿಗಾ ವಹಿಸಬೇಕು. ಪಿಯುಸಿ, ಎಸ್ಸೆಸ್ಸೆಲ್ಸಿ ವಾರ್ಷಿಕೆ ಪರೀಕ್ಷೆ ಸಮಯದಲ್ಲಿ ವಿದ್ಯುತ್ ಕೈಕೊಟ್ಟು ವಿದ್ಯಾರ್ಥಿಗಳ ಓದಿಗೆ ತೊಂದರೆಯಗದಂತೆ ಕ್ರಮ ವಹಿಸಬೇಕು. ಕಾಡಾನೆಗಳ ಹಾವಳಿ ಇರುವ ಅರಗಲ್ಲು, ಬೆಟ್ಟಗಳಲೆ, ತರಿಗಳಲೆ ಹಾಗೂ ಮಲ್ಲಿಪಟ್ಟಣ ಹೋಬಳಿಯ ಕಾಡಂಚಿನ ಹಳ್ಳಿಗಳಲ್ಲಿ ರಾತ್ರಿ ವೇಳೆ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಬ್ಬತ್ತಿ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದ್ದು ಒಂದೆರಡು ಗಂಟೆಗಳ ಕಾಲ ಎಲ್‌ಸಿ ಪಡೆದು ವಿದ್ಯುತ್ ವ್ಯತ್ಯಯವಾದರೆ ಮುಂದಿನ ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ನೀಡಬೇಕು. ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಿಂದ ಬೆಳೆಗಳು ಒಣಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಪೂರೈಕೆ ಸರಿಯಿಲ್ಲವೆಂದು ಶಾಸಕರ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ಮಾಡಿರುವುದು ಸೆಸ್ಕ್‌ಗೆ ಅವಮಾನಕರ ಸಂಗತಿ. ಈ ಬಗ್ಗೆ ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಸೆಸ್ಕ್ ಮುಂದಾಗಬೇಕು ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಲಕ್ಷ್ಮಣ್ ಮಾತನಾಡಿ, ಗಂಜಲಗೂಡು, ರಂಗಾಪುರ, ಬಸವನಹಳ್ಳಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅನೇಕ ರೈತರು ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯುತ್ ಪರಿವರ್ತಕ ಕೆಟ್ಟು ಅಧಿಕೃತವಾಗಿ ನೋಂದಣಿಯಾಗಿರುವ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಇಂಜಿನಿಯರ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಸೆಸ್ಕ್ ಸಹಾಯಕ ಇಂಜಿನಿಯರ್ ಶಿವಕುಮಾರ್, ಅಧಿಕೃತವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದರೂ ರೈತರು ಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಪಂಪ್‌ಸೆಟ್ ಹೊಂದಿರುವ ರೈತರು ಅಧಿಕೃತವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಸಮರ್ಪಕ ವಿದ್ಯುತ್ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರನ್ನು ವಿನಾಕಾರಣ ಅಲೆಸಬಾರದು. ರಾಮನಾಥಪುರ, ಕೊಣನೂರು ಭಾಗದಲ್ಲಿ ವಿದ್ಯುತ್ ಸಮಸ್ಯೆಯಾದರೂ ಇಂಜಿನಿಯರ್ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಈ ಬಗ್ಗೆ ನಿಗಾ ವಹಿಸಬೇಕು ಎಂದು ಸೆಸ್ಕ್ ಇಂಜಿನಿಯರ್ ಚಿನ್ನಸ್ವಾಮಿ, ಯೋಗೇಶ್ ಅವರಿಗೆ ತಾಕೀತು ಮಾಡಿದರು.

ಬೆಮ್ಮತ್ತಿ ವಿದ್ಯುತ್ ಪ್ರಸರಣ ಉಪ ವಿಭಾಗದ ಉದ್ಘಾಟನೆಗೆ ಸಿದ್ಧತೆ ಕೈಗೊಳ್ಳಬೇಕು ಎಂದು ಶ್ರೀಧರ್‌ಗೌಡ ಸೂಚಿಸಿದರು. ತಾಪಂ ಅಧಿಕಾರಿ ಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net