ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನ ಪರಿಶೀಲಿಸಿ: ಡಿಸಿ ಸೂಚನೆ

mysore
Published on

ಮೈಸೂರು: ಜಿಲ್ಲಾದ್ಯಂತ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನಗಳನ್ನು ಪರಿಶೀಲಿಸಬೇಕು. ಪರಿಶೀಲನೆಯ ಸಂದರ್ಭದಲ್ಲಿ ಯಾವುದೇ ವಾಹನದಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಸಾಗಿಸುತ್ತಿರುವುದು ಕಂಡುಬಂದರೆ ಅಂತಹ ವಾಹನವನ್ನು ವಶಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.


ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಎಫ್‌ಎಸ್‌ಟಿ, ಎಸ್‌ಎಸ್‌ಟಿ ಮತ್ತು ವಿವಿಟಿ ತಂಡದ ಮುಖ್ಯಸ್ಥರಿಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿಯಲ್ಲಿ ಮಾತನಾಡಿದರು.


ಹಣವಲ್ಲದೆ ಪಕ್ಷದ ಗುರುತಿರುವ ಟಿ-ಶರ್ಟ್, ಕ್ಯಾಪ್, ಹೆಚ್ಚಿನ ಸಂಖ್ಯೆಯ ಸೀರೆ, ಆಹಾರದ ಕಿಟ್ ಇತ್ಯಾದಿ ರೀತಿಯ ಅಕ್ರಮ ವಸ್ತುಗಳ ಸಾಗಣೆ ಕಂಡುಬಂದರೆ ಅವುಗಳನ್ನು ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಎಫ್‌ಎಸ್‌ಟಿ, ಎಸ್‌ಎಸ್‌ಟಿ ಮತ್ತು ವಿವಿಟಿ ಸೇರಿದಂತೆ ವಿವಿಧ ತಂಡಗಳಿಗೆ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಾಕೀತು ಮಾಡಿದರು.


ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ಕಂಡು ಬಂದ ಸಂದರ್ಭದಲ್ಲಿ ಅಧಿಕಾರಿಗಳು ಜಾಗರೂಕರಾಗಿರಬೇಕು ಹಾಗೂ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಸರಿಸಿ ಅಗತ್ಯ ಕ್ರಮ ವಹಿಸಬೇಕು ಎಂದರು.


ಸಂಶಯಾಸ್ಪದ ಪ್ರಕರಣಗಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರಿಂದ ಸತ್ಯ-ಅಸತ್ಯತೆಯನ್ನು ತಿಳಿಯಬೇಕು ಎಂದು ಹೇಳಿದರು.


ಅಭ್ಯರ್ಥಿಗಳು ಅಧಿಕೃತವಾಗಿ ಘೋಷಣೆಯಾದ ನಂತರದಲ್ಲಿ ಅಧಿಕಾರಿಗಳ ಕೆಲಸ ಹೆಚ್ಚಾಗಲಿದ್ದು, ಆ ಸಮಯದಲ್ಲಿ ಬುದ್ಧಿವಂತಿಕೆ ಹಾಗೂ ನಿಗಾ ವಹಿಸಿ ಕೆಲಸ ಮಾಡಬೇಕು ಎಂದರು.


ತರಬೇತಿಯ ಉದ್ದೇಶವೇ ಅಧಿಕಾರಿಗಳಿಗೆ ಚುನಾವಣಾ ನೀತಿ ಸಂಹಿತೆಯ ಬಗ್ಗೆ ಹಾಗೂ ಅವರ ಪಾತ್ರ, ಜವಾಬ್ದಾರಿಯನ್ನು ತಿಳಿಸುವುದಾಗಿದೆ. ಅದನ್ನು ಅರಿತು ಅಧಿಕಾರಿಗಳು ನಿಯಮಗಳನ್ನು ಪಾಲಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.


ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಅಧಿಕಾರಿಗಳು ಚುನಾವಣಾ ಕಾರ್ಯವನ್ನು ಯಾವುದೇ ಲೋಪವಾಗದಂತೆ ನಿರ್ವಹಿಸಬೇಕು. ಬೇಸಿಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಆರೋಗ್ಯದ ಕಡೆಯೂ ಕಾಳಜಿ ವಹಿಸಬೇಕು ಎಂದರು.
ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಅಕ್ರಮ ವಸ್ತುಗಳು ಹಾಗೂ ಹಣ ಸಾಗಣೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತ ಡಿ.ಕಂಬಣ್ಣ, ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಮೋಹನ್, ಪೊಲೀಸ್ ಇಲಾಖೆಯ ಇನ್‌ಸ್ಪೆಕ್ಟರ್ ಕಾಂತರಾಜು ಸೇರಿದಂತೆ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net