

ಸಿದ್ದಾಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಾಡಗ ಬಾಣಂಗಾಲ ಗ್ರಾಮದ ಮುಖ್ಯರಸ್ತೆಯ ತಿರುವಿನಲ್ಲಿರುವ ಚೆಕ್ ಡ್ಯಾಂ ಕುಸಿಯುವ ಭೀತಿ ಎದರಾಗಿದೆ.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು, ಕುಸಿಯುವ ಹಂತ ತಲುಪಿದೆ. ಇದರಿಂದಾಗಿ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಈ ರಸ್ತೆಯಲ್ಲಿ ಶಾಲಾ ವಾಹನಗಳು, ಕೂಲಿ ಕಾರ್ಮಿಕರ ವಾಹನಗಳು ಹೆಚ್ಚಾಗಿ ಓಡಾಡುತ್ತಿದ್ದು, ಸೇತುವೆ ಕುಸಿದು ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.