ಟೆಕ್ಕಿಗೆ 1.7 ಕೋಟಿ ರೂ. ಆನ್‌ಲೈನ್ ವಂಚನೆ

Online frauds
Published on

ಬೆಳಗಾವಿ: ಆನ್‌ಲೈನ್‌ನಲ್ಲಿ ಹಣಗಳಿಸುವ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೂ, ಬೆಳಗಾವಿ ನಗರದ ಸ್ಪಾಫ್ಟ್‌ವೇರ್ ಇಂಜಿನಿಯರ್ ಒಬ್ಬ ನಕಲಿ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡಿ 1.7 ಕೋಟ್ಯಂತರ ರೂ. ಕಳೆದುಕೊಂಡು ಕಂಗಾಲಾಗಿದ್ದಾನೆ.

ಬೆಳಗಾವಿಯ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಮಾ.29ರಂದು ದಾಖಲಾಗಿರುವ ಆನ್‌ಲೈನ್ ವಂಚನೆ ದೂರಿನ ಪ್ರಕಾರ, ಫೇಸ್‌ಬುಕ್ ಹಾಗೂ ವಾಟ್ಸ್‌ಪ್ ಗ್ರೂಪ್ ಮೂಲಕ ಜನರನ್ನು ಆಕರ್ಷಿಸುವ ಅನಾಮಿಕ ಆನ್‌ಲೈನ್ ವಂಚಕರು ನಕಲಿ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಸೃಷ್ಟಿಸಿ ನೀವು ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಮರುಪಾವತಿ ಸಿಗುತ್ತದೆ ಎಂಬ ಆಸೆ ತೋರಿಸಿ ಬೆಳಗಾವಿ ನಗರದ ಸ್ಪಾಫ್ಟ್‌ವೇರ್ ಇಂಜಿನಿಯರ್‌ನಿಂದ 1.7 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

ಘಟನೆ ವಿವರ: ಆನ್‌ಲೈನ್ ವಂಚನೆಗೊಳಗಾಗಿರುವ ಸ್ಪಾಫ್ಟ್‌ವೇರ್ ಇಂಜಿನಿಯರ್ ಹಲವು ವರ್ಷಗಳಿಂದ ಪ್ರಸಿದ್ಧ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟಾಕ್‌ಗಳಲ್ಲಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದಾನೆ. ಆದರೆ, ಹಣಗಳಿಸುವ ಅತಿ ಆಸೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿನ ಜಾಹೀರಾತುಗಳಿಂದ ಆಕರ್ಷಿತನಾಗಿ ವಾಟ್ಸಾಪ್ ಗುಂಪುಗಳ ಮೂಲಕ ವಂಚಕರೊಂದಿಗೆ ಚಾಟಿಂಗ್ ಮಾಡಿದ್ದಾನೆ. ಬಳಿಕ ಪ್ಲೇ ಸ್ಟೋರ್‌ನಿಂದ ಅಬಾನ್ಸೆ ಪ್ರೊ.ಎಂಬ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸೂಚಿಸಿದರು. ಅದಂತೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ನಕಲಿ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 7 ಲಕ್ಷ ರೂ. ಹೂಡಿಕೆ ಮಾಡಿದ್ದಾನೆ. ಬಳಿಕ 14 ಲಕ್ಷ ರೂ. ಲಾಭ ತೋರಿಸಿದ್ದು, ಅದರಲ್ಲಿ 7 ಲಕ್ಷ ರೂ. ಹಣ ಡ್ರಾ ಮಾಡಿಕೊಳ್ಳಲು ಅವಕಾಶ ನೀಡಿದೆ. ಬಳಿಕ 1.7 ಕೋಟಿ ರೂ. ಹೂಡಿಕೆ ಮಾಡಿದ ನಂತರ 11 ಕೋಟಿ ರೂ. ಲಾಭ ತೋರಿಸಿದ್ದಾರೆ. ಆದರೆ, ಹಣ ಡ್ರಾ ಮಾಡಲು ಅವಕಾಶ ನೀಡಿಲ್ಲ. ಬದಲಾಗಿ ಜಿಎಸ್‌ಟಿ ಸೇರಿ ವಿವಿಧ ತೆರಿಗೆಗಳಿಗೆ ಮುಂಗಡವಾಗಿ ಹಣ ಕಟ್ಟಬೇಕು ಎಂದು ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ಸ್ಪಾಫ್ಟ್‌ವೇರ್ ಇಂಜಿನಿಯರ್ ಕಂಪನಿ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ವೇಳೆ ನಕಲಿ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಎಂಬುದು ಗೊತ್ತಾಗಿದೆ. ಬಳಿಕ ಬೆಳಗಾವಿ ಸಿಇಎನ್‌ನಲ್ಲಿ ದೂರು ದಾಖಲಿಸಿದ್ದಾನೆ.

ಬೆಳಗಾವಿ ಸ್ಪಾಫ್ಟ್‌ವೇರ್ ಇಂಜಿನಿಯರ್ ಒಬ್ಬ ನಕಲಿ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡಿ 1.7 ಕೋಟಿ ರೂ.ಕಳೆದುಕೊಂಡಿದ್ದಾನೆ. ಹೀಗಾಗಿ ಆನ್‌ಲೈನ್‌ನಲ್ಲಿ ಹಣಗಳಿಸುವ ಯಾವುದೇ ಆಮಿಷ, ಜಾಹೀರಾತುಗಳಿಗೆ ಒಳಗಾಗಿ ಹಣ ಹೂಡಿಕೆ ಮಾಡಬೇಡಿ. ಹೂಡಿಕೆದಾರರು ಅಪರಿಚಿತ ವೇದಿಕೆಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಬೇಕು. ಬಿ.ಆರ್.ಗಡ್ಡೇಕರ್, ಸಿಇಎನ್ ಇನ್ಸ್‌ಪೆಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net