

ಬೆಂಗಳೂರು: ಸ್ನೇಹಿತನ ಸೋಗಿನಲ್ಲಿ ನಿವೃತ್ತ ಸೇನಾಧಿಕಾರಿಗೆ ಇ ಮೇಲ್ ಕಳುಹಿಸಿರುವ ಸೈಬರ್ ವಂಚಕರು, 1 ಲಕ್ಷ ರೂ. ಪಡೆದು ಯಾಮಾರಿಸಿದ್ದಾರೆ.
ಫ್ರೇಜರ್ ಟೌನ್ ನಿವಾಸಿ ಬಿ. ಜೋಸೆಫ್ ವಾಜ್ (77) ವಂಚನೆಗೊಳಗಾದವರು. ಅಪರಿಚಿತರ ವಿರುದ್ಧ ಪೂರ್ವ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೋಸೆಫ್ ಕುಟುಂಬದ ಜತೆ ನಗರದಲ್ಲಿ ನೆಲೆಸಿದ್ದಾರೆ. ಸ್ನೇಹಿತ ಕರ್ನಲ್ ಕೃಪಾಲ್ ಸಿಂಗ್ ಮೆಹ್ತಾ ಅವರ ಇ ಮೇಲ್‌ನಿಂದ ‘ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಿದ್ದು, ಪಾರ್ಟಿಗೆ ಬರುವಂತೆ’ ಜೋಸೆಫ್‌ಗೆ ಸಂದೇಶ ಬಂದಿತ್ತು.
ಅದೇ ದಿನ, ‘ತಾನು ಮತ್ತು ಪತ್ನಿ ಟರ್ಕಿಯಲ್ಲಿನ ಶಿಪ್‌ನಲ್ಲಿ ಇದ್ದೇವೆ. ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದೆಹಲಿಯ ಮನೆ ನವೀಕರಣ ನಡೆಯುತ್ತಿದೆ. ಗುತ್ತಿಗೆದಾರನಿಗೆ ತುರ್ತಾಗಿ 1 ಲಕ್ಷ ರೂ. ನೀಡಬೇಕಿದೆ. ಹಣ ಕಳುಹಿಸುವಂತೆ ಕೋರಿ ಮತ್ತೊಂದು ಇಮೇಲ್ ಸಂದೇಶ ಬಂದಿತ್ತು. ಇದನ್ನು ಸ್ನೇಹಿತ ಕರ್ನಲ್ ಕೃಪಾಲ್ ಸಿಂಗ್‌ಗೆ ಕಳುಹಿಸಿದ್ದಾನೆ ಎಂದು ನಂಬಿದ ಜೋಸೆಫ್, ಇಮೇಲ್‌ನಲ್ಲಿ ಸೂಚಿಸಿದ್ದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ.
ಇದಾದ ಬಳಿಕ ಕರ್ನಲ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಹಣ ಕೋರಿ ಇ ಮೇಲ್ ಕಳುಹಿಸಿಲ್ಲ ಎಂದಿದ್ದಾರೆ. ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿದ್ದು ದೂರು ಕೊಟ್ಟಿದ್ದಾರೆ.