

ಬೆಂಗಳೂರು : ಹಳೇ ನಾಣ್ಯಗಳನ್ನು ಖರೀದಿ ಮಾಡುವ ಸೋಗಿನಲ್ಲಿ ಅಮಾಯಕ ವ್ಯಕ್ತಿಗೆ ನಂಬಿಸಿ ಸೈಬರ್ ಕಳ್ಳರು 3.67 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.ಹೊಸೂರು ರಸ್ತೆ ಆರ್.ಎಚ್.ಕಾಲನಿಯ ವೆಂಕಟೇಶ್(61) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಬಿನ್ಸು ಹರಿಜನ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಆಗ್ನೇಯ ವಿಭಾಗ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಲ ವರ್ಷಗಳಿಂದ ವೆಂಕಟೇಶ್, ಹಳೇ ನಾಣ್ಯಗಳನ್ನು ಸಂಗ್ರಹ ಮಾಡಿದ್ದರು. ಇತ್ತೀಚೆಗೆ ಅವುಗಳನ್ನು ಮಾರಾಟ ಮಾಡಲು ಜಾಲತಾಣದಲ್ಲಿ ಮುಂದಾಗಿದ್ದರು. ಇದನ್ನು ಅರಿತ ವಂಚಕ, ನ.8ರಂದು ವೆಂಕಟೇಶ್ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಬಳಿ ಇರುವ ಹಳೆಯ ನಾಣ್ಯಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸುತ್ತೇನೆ. ಅದಕ್ಕೂ ಮೊದಲು ಆರ್‌ಬಿಐನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಶುಲ್ಕ ಮತ್ತು ತೆರಿಗೆ ಪಾವತಿಸುವಂತೆ ಹಂತ ಹಂತವಾಗಿ 3.67 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ.
ಮತ್ತೆ ಹಣ ಕೇಳಿದಾಗ ಅನುಮಾನ ಬಂದು ವೆಂಕಟೇಶ್, ತನ್ನ ಹಣವನ್ನು ಹಿಂತಿರುಗಿಸುವಂತೆ ಒತ್ತಾಯ ಮಾಡಿದ್ದಾರೆ. ಕೊನೆಗೆ ಸೈಬರ್ ಕಳ್ಳ, ತನ್ನ ಸಂಪರ್ಕವನ್ನು ಕಡಿತ ಮಾಡಿಕೊಂಡು ಮೋಸ ಮಾಡಿದ್ದಾನೆ. ನೊಂದ ವೆಂಕಟೇಶ್, ದಿಕ್ಕು ತೋಚದೆ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿರುವುದಾಗಿ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.