ಖತರ್ನಾಕ್ ವಂಚಕರ ಸೆರೆ; ಶಾಸಕರ ಹೆಸರಿನಲ್ಲಿ ನಕಲಿ ಲೆಟರ್​ಹೆಡ್ ಸೃಷ್ಟಿ

CRIME
Published on

ಬೆಂಗಳೂರು: ಶಾಸಕರ ಹೆಸರಿನಲ್ಲಿ ನಕಲಿ ಲೆಟರ್​ಹೆಡ್ ಸೃಷ್ಟಿ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಧಾನಸೌಧ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ವಸಂತಪುರದ ಬಸವ ಲಿಂಗಯ್ಯ (45) ಹಾಗೂ ಕೋಲಾರದ ಅನಿಲ್​ಕುಮಾರ್ (27) ಬಂಧಿತರು.

ಹೆಚ್ಚು ಹಣ ಸಂಪಾದನೆ ಉದ್ದೇಶ!: ಬಸವಲಿಂಗಯ್ಯ ಚಿಕ್ಕಬಳ್ಳಾಪುರ ಜಿಲ್ಲಾ ಪಂಚ ಯಿತಿ ಸಹಾಯಕ ಕಾರ್ಯದರ್ಶಿ ಹೇಮಂತ್ ಎಂಬá-ವರನ್ನು ಪರಿಚಯಿಸಿಕೊಂಡಿದ್ದ. ಸಚಿವರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಪರಿಚಯವಿದೆ. ಆಯಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಡುವುದಾಗಿ ಆಮಿಷವೊಡ್ಡಿ ಹಣ ಪಡೆದುಕೊಂಡಿದ್ದ.

ಬಳಿಕ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಹೆಸರಿನಲ್ಲಿ ನಕಲಿ ಲೆಟರ್​ಹೆಡ್ ತಯಾರಿಸಿದ್ದ. ಹೇಮಂತ್​ಕುಮಾರ್ ವರ್ಗಾವಣೆಗೆ ಶಿಫಾರಸು ಮಾಡಿ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದ. ಅಧಿಕಾರಿಗಳ ಪರಿಶೀಲನೆ ವೇಳೆ ಲೆಟರ್​ಹೆಡ್ ನಕಲಿ ಎಂಬುದು ಗೊತ್ತಾಗಿ ವಿಶ್ವನಾಥ್ ಗಮನಕ್ಕೆ ತಂದಿದ್ದರು. ಅವರು ಪೊಲೀಸರಿಗೆ ದೂರು ನೀಡಿದ್ದರು. ಪತ್ರದಲ್ಲಿ ಉಲ್ಲೇಖವಾಗಿದ್ದ ಹೇಮಂತ್​ಕುಮಾರ್ ಎಂಬಾತನ ಹೆಸರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಆತನ ನೆರವಿನಿಂದ ಬಸವಲಿಂಗಯ್ಯನನ್ನು ಬಂಧಿಸಿದ್ದಾರೆ.

ವಂಚನೆಗೆ ನಕಲಿ ಐಡಿ ಕಾರ್ಡ್!: ಮತ್ತೊಂದುಪ್ರಕರಣದ ಆರೋಪಿ ಅನಿಲ್​ಕುಮಾರ್ ತಾನು ಕೆಪಿಎಸ್​ಸಿ ಅಧಿಕಾರಿ ಎಂದು ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಕೆಪಿಎಸ್​ಸಿ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ಮತ್ತು ಬ್ಯಾಡ್ಜ್ ತಯಾರಿಸಿಟ್ಟುಕೊಂಡಿದ್ದು, ಅದನ್ನು ತೋರಿಸಿ ನಂಬಿಕೆ ಗಿಟ್ಟಿಸಿಕೊಳ್ಳುತ್ತಿದ್ದ. ಹಿರಿಯ ಅಧಿಕಾರಿಗಳ ಜತೆ ಒಡನಾಟವಿದೆ. ಬಿಎಂಟಿಸಿ, ಅಂಗನವಾಡಿ, ಮಕ್ಕಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ.

ಗೋವಿಂದರಾಜನಗರದ ನಿವಾಸಿ ಗಿರೀಶ್ ಎಂಬಾತನ ತಾಯಿಗೆ ನವೆಂಬರ್​ನಲ್ಲಿ ಕರೆ ಮಾಡಿದ್ದ. ಕಚೇರಿಯಲ್ಲಿ ಟೈಪಿಸ್ಟ್ ಹುದ್ದೆ ಖಾಲಿ ಇದೆ. ತಾವು ಒಪು್ಪವುದಾದರೆ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ರ್ಚಚಿಸುತ್ತೇನೆ. ಅದಕ್ಕೆ ಹಣ ಖರ್ಚಾಗುತ್ತದೆ ಎಂದು ಹೇಳಿ 8 ಸಾವಿರ ರೂ.ಗಳನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ.

ವಿಧಾನಸೌಧ ಬಳಿಗೆ ಕರೆಸಿಕೊಂಡ

ಕೆಲದಿನಗಳ ಬಳಿಕ ಗಿರೀಶ್ ತಾಯಿಗೆ ಮತ್ತೊಮ್ಮೆ ಕರೆ ಮಾಡಿದ್ದ ಅನಿಲ್​ಕುಮಾರ್ ಎಂ.ಎಸ್. ಕಟ್ಟಡದ ಬಳಿಗೆ ಗಿರೀಶ್​ನನ್ನು ಕರೆಸಿಕೊಂಡಿದ್ದ. ಅಲ್ಲಿ 20 ಸಾವಿರ ರೂ.ಗಳನ್ನು ಪಡೆದಿದ್ದ. ಅಧಿಕಾರಿಗಳ ಜತೆ ಸಭೆ ಇದೆ. ಸಭೆ ಮುಗಿದ ಬಳಿಕ ಅವರ ಜತೆ ಮಾತನಾಡುತ್ತೇನೆ. ಇಲ್ಲಿಯೇ ಕಾಯುತ್ತಿರು ಎಂದು ಹೇಳಿ ಹೋಗಿದ್ದ ಆತ, ಮತ್ತೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಈ ಬಗ್ಗೆ ಗಿರೀಶ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆತನ ಫೋನ್ ಕರೆಗಳ ವಿವರ ಹಾಗೂ ಹಣ ಹಾಕಿಸಿಕೊಂಡಿದ್ದ ಬ್ಯಾಂಕ್ ವಿವರ ಆಧರಿಸಿ ಅನಿಲ್​ಕುಮಾರ್​ನನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಈತ ಇದೇ ರೀತಿ ಇನ್ನೂ ಹಲವು ಯುವಕರಿಗೆ ವಂಚಿಸಿರುವುದು ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net