

ಬೆಂಗಳೂರು: ಮೊಬೈಲ್ ಆ್ಯಪ್ ಮೂಲಕ ಪಡೆದಿದ್ದ ಸಾಲವನ್ನು ಪಾವತಿಸಲು ಮುಂದಾಗಿದ್ದ ಹಾಗೂ ಸಾಲ ಸ್ವೀಕರಿಸಲು ಆಪ್ ಡೌನ್ಲೋಡ್ ಮಾಡಿಕೊಂಡಿದ್ದ ಇಬ್ಬರಿಗೆ ಒಟ್ಟು 1.87 ಲಕ್ಷ ರೂ. ವಂಚಿಸಿರುವ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಸೈಬರ್ ಕ್ರೖೆಂ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯಪುರದ ಮುನೇಶ್ವರನಗರ ನಿವಾಸಿ ವ್ಯಾಪಾರಿ ಕುಮಾರ್ ಜೈಶಂಕರ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಎಚ್.ಡಿ. ದಿನೇಶ್ ವಂಚನೆಗೊಳಗಾದವರು.
ಕುಮಾರ್ ಜೈಶಂಕರ್ ಕ್ಲಿಕ್ಸ್ ಕ್ಯಾಪಿಟಲ್ ಎಂಬ ಮೊಬೈಲ್ ಆಪ್ನಲ್ಲಿ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸಲು ಮುಂದಾಗಿದ್ದಾಗ ಅಪರಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಲಿಂಕ್ ಕಳುಹಿಸುತ್ತೇನೆ, ಅದರಲ್ಲಿ ಬ್ಯಾಂಕ್ ವಿವರ ಭರ್ತಿ ಮಾಡಿ ಸಾಲದ ಹಣ ಕಟ್ಟುವಂತೆ ತಿಳಿಸಿದ್ದ. ಆತನ ಮಾತನ್ನು ನಂಬಿ ಲಿಂಕ್ನಲ್ಲಿ ಮಾಹಿತಿಯನ್ನು ತುಂಬಿದ್ದರು. ನಂತರವ ಕೆಲವೇ ನಿಮಿಷಗಳಲ್ಲಿ ಪತ್ನಿಯ ಖಾತೆಯಿಂದ 30 ಸಾವಿರ ರೂ. ಹಾಗೂ ಆತನ ಖಾತೆಯಿಂದ 67,434 ರೂ. ಕಡಿತವಾಗಿದೆ. ಲಿಂಕ್ ಕಳುಹಿಸಿದ್ದ ವ್ಯಕ್ತಿ ಮತ್ತೆ ಸಂಪರ್ಕಕ್ಕೆ ಸಿಗದೆ ಇದ್ದಾಗ ವಂಚನೆಯಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ತಿಳಿಸಿದ್ದಾರೆ.
ಫೇಸ್ಬುಕ್ನಿಂದ ಆಪ್ ಡೌನ್ಲೋಡ್
ದಿನೇಶ್ ಎಂಬುವರು ಸಾಲ ಪಡೆಯಲು ಮುಂದಾಗಿದ್ದರು. ಫೇಸ್ಬುಕ್ನಲ್ಲಿ ಸಿಕ್ಕ ಲಿಂಕ್ ಮೂಲಕ ಟೆಕ್ ಟಾಸ್ಕ್ ಎಂಬ ಮೊಬೈಲ್ ಆಪ್ ಡೌನ್ಲೋಡ್ ಮಾಡಿದ್ದರು. ಸಾಲ ಪಡೆಯಲು ಆಪ್ನಲ್ಲಿ ಮಾಹಿತಿಯನ್ನು ನೀಡಿದ್ದರು. ಬಳಿಕ ಗೂಗಲ್ನಲ್ಲಿ ಸಿಕ್ಕ ಟೆಕ್ ಟಾಸ್ಕ್ ಕಂಪನಿಯ ಸಹಾಯವಾಣಿಗೆ ಕರೆ ಮಾಡಿ ಸಾಲದ ಕುರಿತು ವಿಚಾರಿಸಿದ್ದರು. ಕಂಪನಿಯ ನೌಕರನ ಸೋಗಿನಲ್ಲಿ ಮಾತನಾಡಿದ್ದ ರಾಜು ಸಿಂಗ್ ಎಂಬಾತ, 80 ಸಾವಿರ ರೂ. ಸಾಲ ಅನುಮೋದನೆಯಾಗಿದೆ. ಫೋನ್ಪೇನಲ್ಲಿ ಫೋನ್ ನಂಬರ್ ಮತ್ತು ಆರ್ಬಿಎಲ್ ನಮೂದಿಸುವಂತೆ ಸೂಚಿಸಿದ್ದ. ಆತನ ಸೂಚನೆಯಂತೆ ಮಾಡಿದಾಗ ಬ್ಯಾಂಕ್ ಖಾತೆಯಿಂದ 90 ಸಾವಿರ ರೂ. ಕಡಿತವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಆಗ್ನೇಯ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.