

ಆಲ್ದೂರು(ಚಿಕ್ಕಮಗಳೂರು): ದೂರವಾಣಿ ಮೂಲಕ 20 ಜನರಿಗೆ ಊಟ ಆರ್ಡರ್ ಮಾಡಿ, ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ನಂಬಿಸಿ 9 ಸಾವಿರ ರೂ. ವಂಚಿಸಲಾಗಿದೆ. ಆಲ್ದೂರು-ಚಿಕ್ಕಮಗಳೂರು ರಸ್ತೆಯ ವೆಸ್ಟರ್ನ್ ಘಾಟ್ ಹೋಟೆಲ್ಗೆ ಭಾನುವಾರ ರಾತ್ರಿ 9ಕ್ಕೆ ಕರೆ ಮಾಡಿದ ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕ ಸುರೇಶ್ಗೆ ತಾನು ವಿಕ್ರಂ ವಾಗ್ಮೋರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮಾಲೀಕನ ಮೊಬೈಲ್ಗೆ ಮಿಲಿಟರಿ ಉಡುಪು ಧರಿಸಿದ್ದ ಫೋಟೋ ಕಳಿಸಿ ನಾವು 20 ಜನರಿದ್ದೇವೆ. ದೇವಸ್ಥಾನಕ್ಕೆ ಹೋಗಿಬರುತ್ತಿದ್ದು ಊಟ ರೆಡಿ ಮಾಡುವಂತೆ ತಿಳಿಸಿದ್ದಾನೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ವ್ಯಕ್ತಿ ನಮ್ಮ ಕಡೆಯವರು ಪಾರ್ಸೆಲ್ ತೆಗೆದುಕೊಳ್ಳುತ್ತಾರೆ. ನಿಮ್ಮ ಬ್ಯಾಂಕ್ ಖಾತೆ ನಂಬರ್ ಕೊಟ್ಟರೆ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾನೆ.
ಅವರ ಮಾತನ್ನು ನಂಬಿ ಹೋಟೆಲ್ ಮಾಲೀಕ ತನ್ನ ಮಗಳ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ವಿಕ್ರಂ ಹೆಸರಿನ ವ್ಯಕ್ತಿ ಹೋಟೆಲ್ ಮಾಲೀಕನ ಮಗಳಿಗೆ ಕರೆ ಮಾಡಿ ಮತ್ತೆ ಬ್ಯಾಂಕ್ ಖಾತೆ ಹಾಗೂ ಒಟಿಪಿ ಪಡೆದಿದ್ದು, ಕೆಲವೇ ಕ್ಷಣಗಳಲ್ಲಿ ಮಗಳ ಖಾತೆಯಲ್ಲಿದ್ದ 9 ಸಾವಿರ ರೂ. ಡ್ರಾ ಆಗಿರುವ ಮೆಸೇಜ್ ಬಂದಿದೆ. ಆ ಮೊಬೈಲ್ ನಂಬರ್ಗೆ ಕರೆ ಮಾಡಿದರೆ ಫೋನ್ ಸ್ವಿಚ್ಡ್ಆಫ್ ಬಂದಿದೆ. ಈ ಸಂಬಂಧ ಆಲ್ದೂರು ಠಾಣೆಗೆ ಸುರೇಶ್ ದೂರು ನೀಡಿದ್ದಾರೆ.