

ವಾಸ್ತವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಕಾರ್ಡ್ ನೀಡುವ ಯಾವುದೇ ಯೋಜನೆ ಜಾರಿಯಾಗಿಲ್ಲ. ಏಕರೂಪ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರದ ಜತೆ ಕಾರ್ಡ್ ಟೆಕ್ (ಇಂಡಿಯಾ) ಪ್ರೖೆವೇಟ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿರುವುದಾಗಿ ನಂಬಿಸುತ್ತಿರುವ ವಂಚಕರು ಪ್ರತಿಕಾರ್ಡ್ಗೆ 260 ರೂ.ನಂತೆ ವಸೂಲಿ ಮಾಡುತ್ತಿದ್ದಾರೆ. ಈ ಜಾಲದ ಬಗ್ಗೆ ಎಚ್ಚರ ವಹಿಸುವಂತೆ ಆಹಾರ ಇಲಾಖೆ ಸೂಚನೆ ಕೊಟ್ಟಿದೆ.
ವಂಚನೆ ಹೇಗೆ?: ಸ್ಮಾರ್ಟ್ಕಾರ್ಡ್ ಮಾಡಿಕೊಡಲು ನಮ್ಮ ಕಂಪನಿ (ಕಾರ್ಡ್ ಟೆಕ್ (ಇಂಡಿಯಾ) ಪ್ರೖೆವೇಟ್ ಲಿಮಿಟೆಡ್) ಜತೆ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಸ್ಥಳೀಯವಾಗಿ ಕಾರ್ಡ್ ಮಾಡಿಕೊಡುವ ಆರ್ಡರ್ ನಿಮಗೆ ಕೊಡುತ್ತೇವೆ.
ಕೇಂದ್ರದ ಆದೇಶದಲ್ಲೇನಿದೆ?
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (ಎನ್ಎಫ್ಎಸ್ಎ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ (ಪಿಡಿಎಸ್) ಅರ್ಹ ಫಲಾನುಭವಿಗಳನ್ನು ಗುರುತಿಸಲು ದೇಶಾದ್ಯಂತ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಜಾರಿಗೆ ತರಲಾಗುತ್ತಿದೆ.
ದೇಶದ ಎಲ್ಲ ಪಡಿತರ ಚೀಟಿಗಳು ಒಂದೇ ಮಾದರಿಯಲ್ಲಿ ಇರಬೇಕೆಂದು ಏಕರೂಪ ಮಾದರಿ ಸಿದ್ಧಪಡಿಸಲಾಗಿದೆ. ಇನ್ಮುಂದೆ ಪ್ರಿಂಟ್ ಆಗುವ ರೇಷನ್ ಕಾರ್ಡ್ಗಳು ಇದೇ ಮಾದರಿಯಲ್ಲಿ ಇರಬೇಕು. ಈ ಕಾರ್ಡ್ನಲ್ಲಿ ಪಡಿತರ ಚೀಟಿದಾರರ ಸಾಮಾನ್ಯ ಮಾಹಿತಿ ಇರಬೇಕು. ಆಯಾ ರಾಜ್ಯದ ಸ್ಥಳೀಯ ಭಾಷೆ ಹಾಗೂ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಇರಬೇಕು. ಕಡ್ಡಾಯವಾಗಿ 10 ಡಿಜಿಟ್ ರೇಷನ್ ಸಂಖ್ಯೆ ಮತ್ತು ಮೊದಲ ಎರಡು ಸಂಖ್ಯೆ ರಾಜ್ಯದ್ದಾಗಿರಬೇಕು ಎಂದು ಕೇಂದ್ರ ಆಹಾರ ಇಲಾಖೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದೆ.
ನಕಲಿ ಆದೇಶದಲ್ಲೇನಿದೆ?
ಕೇಂದ್ರ ಸರ್ಕಾರ ಕಳುಹಿಸಿರುವ ಸುತ್ತೋಲೆಯನ್ನೇ ನಕಲು ಮಾಡಿರುವ ಕಿಡಿಗೇಡಿಗಳು ಆದೇಶದ ಪ್ರತಿಯ ಮೇಲೆ ಕೇಂದ್ರ ಸರ್ಕಾರ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕರ ವಿತರಣೆ, ಆಹಾರ ಇಲಾಖೆಯಿಂದ, ಪ್ರಧಾನ ಕಾರ್ಯದರ್ಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕರ್ನಾಟಕ ಇವರಿಗೆ ಎಂದು ನಮೂದಿಸಿ ಕಾರ್ಡ್ ಟೆಕ್ (ಇಂಡಿಯಾ) ಪ್ರೖೆವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಹೊಸದಾಗಿ ‘ಏಕರೂಪ ಸ್ಮಾರ್ಟ್ ಪಡಿತರ ಚೀಟಿ’ ಮಾಡಿಸಲು ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನಮೂದಿಸಲಾಗಿದೆ. ಇದನ್ನೇ ತೋರಿಸಿ ಸಾರ್ವಜನಿಕರು, ಸ್ಮಾರ್ಟ್ ಕಾರ್ಡ್ ಮುಂದ್ರಣ ಸಂಸ್ಥೆಗಳು, ಸೈಬರ್ ಕೇಂದ್ರಗಳಿಗೆ ವಂಚನೆ ಮಾಡಲಾಗುತ್ತಿದೆ.
ಪ್ರತಿಕಾರ್ಡ್ಗೆ 260 ರೂ.!
ರಾಜ್ಯದಲ್ಲಿ 1,16,84,911 ಬಿಪಿಎಲ್ ಕಾರ್ಡ್ದಾರರು, 19,41,692 ಎಪಿಎಲ್ ಕಾರ್ಡ್ದಾರರು, 7,69,585 ಅಂತ್ಯೋದಯ ಸೇರಿ ಒಟ್ಟು 1,43,96,188 ಪಡಿತರ ಚೀಟಿದಾರರಿದ್ದಾರೆ. ಪ್ರತಿ ಕಾರ್ಡ್ದಾರರಿಂದ ಸ್ಮಾರ್ಟ್ ಕಾರ್ಡ್ ಕೊಡುವುದಾಗಿ 260 ರೂ. ವಸೂಲಿ ಮಾಡಲಾಗುತ್ತಿದೆ. ಬೆಂಗಳೂರು ಸೇರಿ ಹಲವೆಡೆ ವಂಚನೆ ಜಾಲ ಸಕ್ರಿಯವಾಗಿದ್ದು ಕೋಟ್ಯಂತರ ರೂ. ವಸೂಲಿ ಮಾಡಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.
ಅನರ್ಹ ಬಿಪಿಎಲ್ಗೆ 31ರ ಗಡುವು ಬೆಳಗಾವಿ: ನಕಲಿ ದಾಖಲೆ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದಿರುವ ಅನರ್ಹ ಬಿಪಿಎಲ್ ಕಾರ್ಡ್ದಾರರಿಗೆ ಜ.31ರವರೆಗೆ ಗಡುವು ನೀಡಲಾಗಿದೆ. ಫೆಬ್ರವರಿಯಿಂದ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಕೆಲಸ ಆರಂಭ ವಾಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿ ಸೇರಿ ಆರ್ಥಿಕವಾಗಿ ಸದೃಢವಾಗಿರುವವರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅವುಗಳಿಗೆ ಕಡಿವಾಣ ಹಾಕಲು ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸ್ಮಾರ್ಟ್ ಕಾರ್ಡ್ ಯೋಜನೆಯೇ ಇಲ್ಲ. ರಾಜ್ಯದಲ್ಲಿ ಎರಡು ಕಡೆ ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ. ವಂಚನೆಗೆ ಒಳಗಾದವರು ಈವರೆಗೆ ದೂರು ಕೊಟ್ಟಿಲ್ಲ. ಆಹಾರ ಇಲಾಖೆಗೆ ಮೌಖಿಕವಾಗಿ ಮಾಹಿತಿ ಸಿಕ್ಕಿದೆ. ಸ್ಮಾರ್ಟ್ ಕಾರ್ಡ್ ಕೊಡುವುದಾಗಿ ಯಾರಾದರೂ ಹಣ ಕೇಳಿದರೆ ನಂಬಬೇಡಿ. ಮೋಸ ಹೋಗಿರುವ ಕಾರ್ಡ್ದಾರರು ಹಾಗೂ ಏಜೆನ್ಸಿಗಳು ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಇಲಾಖೆ ಕ್ರಮ ಕೈಗೊಳ್ಳಲಿದೆ. | ಶಮ್ಲಾ ಇಕ್ಬಾಲ್ ಆಯುಕ್ತರು, ಆಹಾರ ಇಲಾಖೆ
| ಬೇಲೂರು ಹರೀಶ ಬೆಂಗಳೂರು