

ಬೆಂಗಳೂರು: ಚೀಟಿಗೆ ಕಟ್ಟಿಸಿಕೊಂಡಿದ್ದ ಹಣಕ್ಕೆ ಅಧಿಕ ಲಾಭ ಕೊಡುವುದಾಗಿ ಜನರಿಗೆ ನಂಬಿಸಿದ್ದ ವಂಚಕರು, ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಿ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಅರಿಶಿಣಕುಂಟೆಯ ಪರಿಮಳನಗರ ನಿವಾಸಿ ರಾಜೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಶಿವನಪುರದ ವೆಂಕಟೇಶ್ ಬಾಬು, ಲೋಕೇಶ್ ಬಾಬು ಮತ್ತು ನಟರಾಜ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದಾರೆ. ಶಿವನಪುರದ ಗೋವಿಂದರಾಜು ಹಾಗೂ ಆತನ ಮಕ್ಕಳಾದ ವೆಂಕಟೇಶ್ ಬಾಬು, ಲೋಕೇಶ್ ಬಾಬು ಮತ್ತು ನಟರಾಜ್ ಎಂಬುವರು ಊದುಬತ್ತಿ ಹಾಗೂ ಟೀ ಪುಡಿ ಕಾರ್ಖಾನೆ ಹೊಂದಿದ್ದಾರೆ. ಅಲ್ಲದೇ, ಕಳೆದ 12 ವರ್ಷಗಳಿಂದ ಬಾಬು ಚಿಟ್ ಫಂಡ್ ಹೆಸರಿನಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇವರ ಬಳಿ ರಾಜೇಶ್ 2018ರಲ್ಲಿ ಎರಡು ಚೀಟಿಗಳಿಗೆ 12 ಲಕ್ಷ ರೂ. ಹಾಗೂ ಪತ್ನಿ ಹೆಸರಿನಲ್ಲಿ ಎರಡು ಚೀಟಿಗೆ 6.50 ಲಕ್ಷ ರೂ. ಅಕ್ಟೋಬರ್‌ವರೆಗೂ ಕಟ್ಟಿದ್ದರು. ವೆಂಕಟೇಶ್ ಬಾಬು, ಲೋಕೇಶ್ ಬಾಬು ಮತ್ತು ನಟರಾಜ್ ಸಹೋದರರು ಚೀಟಿ ಹಣ ವಾಪಸ್ ಕೊಡದೇ, ನ. 5ರಂದು ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ಫೋನ್ ಮೂಲಕ ಕರೆ ಮಾಡಿದರೂ ಸಂಪರ್ಕಕ್ಕೂ ಸಿಕ್ಕಿಲ್ಲ.
ಇದೇ ರೀತಿ ಅಡಕಮಾರನಹಳ್ಳಿ, ಗೆಜ್ಜಗದಹಳ್ಳಿ, ಕೆಂಗನಹಳ್ಳಿ, ಕಿತ್ತನಹಳ್ಳಿ, ಅವ್ವೇರಹಳ್ಳಿಯಲ್ಲಿನ 80ಕ್ಕೂ ಹೆಚ್ಚು ಜನರಿಂದ ಚೀಟಿಗೆ ಹಣ ಕಟ್ಟಿಸಿಕೊಂಡಿದ್ದರು. ಅವರಿಗೂ ಹಣ ವಾಪಸ್ ನೀಡಿಲ್ಲ. ಚೀಟಿ ಹಣ ಡ್ರಾ ಮಾಡಿದ ಬಳಿಕ ಇನ್ನಷ್ಟು ಲಾಭ ಕೊಡುವುದಾಗಿ ನಂಬಿಸಿ ಹಣವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಇದೀಗ ಹಣ ಕೊಡದೇ ಏಕಾಏಕಿ ನಾಪತ್ತೆಯಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ರಾಜೇಶ್ ಅವರು ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.