

ಬೆಂಗಳೂರು: ಕಡಿಮೆ ಮೊತ್ತಕ್ಕೆ ಫ್ಲಾಟ್‌ಗಳನ್ನು ಭೋಗ್ಯಕ್ಕೆ ನೀಡಲಾಗುವುದು ಎಂಬ ಜಾಹೀರಾತನ್ನು ಎಲ್ಲಿಯಾದರೂ ಗಮನಿಸಿದರೆ ಎಚ್ಚರ…!
ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ಪಡೆದು, ಮಾಲೀಕರಿಗೆ ಗೊತ್ತಾಗದಂತೆ ಜನರಿಂದ ಲಕ್ಷಾಂತರ ರೂ. ಪಡೆದು ಭೋಗ್ಯಕ್ಕೆ ನೀಡಿ ಮೋಸ ಮಾಡಿರುವ ವ್ಯವಸ್ಥಿತ ಜಾಲವೊಂದು ಬೆಳಕಿಗೆ ಬಂದಿದೆ. ಇದೇರೀತಿ ಬೆಂಗಳೂರಿನಲ್ಲಿ 42ಕ್ಕೂ ಹೆಚ್ಚು ಮಂದಿಗೆ ನಂಬಿಸಿದ ವಂಚಕರು, ಲಕ್ಷಾಂತರ ರೂ. ಪಡೆದು ಯಾಮಾರಿಸಿದ್ದಾರೆ.
ಎಚ್‌ಆರ್‌ಬಿಆರ್ ಲೇಔಟ್ ನಿವಾಸಿ ಕಿರಣ್‌ಕುಮಾರ್ ನೀಡಿದ ದೂರಿನ ಮೇರೆಗೆ ರಂಜನ್ ದವಮಣಿ(40), ಮನೋಹರ್ ನೇನಾವತ್ (45) ಹಾಗೂ ಈತನ ಪತ್ನಿ ಶೀತಲ್ ಮನೋಹರ್ (40) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಕಿರಣ್‌ಕುಮಾರ್ ಅವರು 2018ರಲ್ಲಿ ಭೋಗ್ಯಕ್ಕಾಗಿ ಮನೆಯನ್ನು ಹುಡುಕುತ್ತಿದ್ದರು. ಆರೋಪಿ ರಂಜನ್ ಭೋಗ್ಯಕ್ಕೆ ಫ್ಲ್ಯಾಟ್‌ಗಳಿವೆ ಎಂದು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದ. ಇದನ್ನು ಗಮನಿಸಿದ್ದ ಕಿರಣ್, ಆರೋಪಿಯನ್ನು ಸಂಪರ್ಕಿಸಿದ್ದರು. ಬಳಿಕ ಕಿರಣ್ ಅವರನ್ನು ಭೇಟಿಯಾಗಿದ್ದ. ಪ್ರಭುಶ್ರೀ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿದ್ದ ರಂಜನ್ ಫ್ಲ್ಯಾಟ್ ತೋರಿಸಿದ್ದ.
ಈ ವೇಳೆ ಆ ಪ್ಲಾೃಟ್‌ನಲ್ಲಿದ್ದ ದಂಪತಿ ಮನೋಹರ್ ನೇನಾವತ್ ಮತ್ತು ಶೀತಲ್‌ನನ್ನು ಪರಿಚಯಿಸಿದ್ದ. ಫ್ಲ್ಯಾಟ್ ಮಾಲೀಕ ಗಂಗಾಧರ ಸೋಮಸುಂದರಂ ಅವರಿಂದ ಬಾಡಿಗೆಗೆ ಪಡೆದುಕೊಂಡಿದ್ದು, ಅವರ ಒಪ್ಪಿಗೆಯ ಮೇರೆಗೆ ಇದೀಗ ಭೋಗ್ಯಕ್ಕೆ ನೀಡುತ್ತಿದ್ದೇವೆ ಎಂದಿದ್ದರು. ಅಲ್ಲದೆ, ಬಾಡಿಗೆಗೆ ಇದ್ದ ಕರಾರು ಪತ್ರ ಹಾಗೂ ಫ್ಲ್ಯಾಟ್ ಮಾಲೀಕರ ದಾಖಲಾತಿಗಳನ್ನು ತೋರಿಸಿದ್ದರು. 17 ಲಕ್ಷ ರೂ. ಗೆ ವ್ಯವಹಾರ ಕುದುರಿಸಿದ್ದರು.
ಇದನ್ನು ನಂಬಿದ ಕಿರಣ್, 2018ರಲ್ಲಿ ಆರೋಪಿಗಳು ನೀಡಿದ ಖಾತೆಗೆ ಭೋಗ್ಯದ ಹಣ 17 ಲಕ್ಷ ರೂ. ಜಮೆ ಮಾಡಿ, ಫ್ಲ್ಯಾಟ್‌ಗೆ ಬಂದು ನೆಲೆಸಿದ್ದರು.ಆರೋಪಿಗಳು ಎರಡು ವರ್ಷದಿಂದ ಬಾಡಿಗೆ ಹಣವನ್ನು ಮಾಲೀಕ ಗಂಗಾಧರ್‌ಗೆ ಪಾವತಿಸಿದ್ದರು. ಹೀಗಾಗಿ, ಒಮ್ಮೆಯೂ ಕೂಡ ಮಾಲೀಕ ಗಂಗಾಧರ ಫ್ಲ್ಯಾಟ್ ಕಡೆ ಹೋಗಿರಲಿಲ್ಲ. ಇತ್ತೀಚೆಗೆ ಕಳೆದ ಮೂರು ತಿಂಗಳಿಂದ ಫ್ಲ್ಯಾಟ್‌ನ ಬಾಡಿಗೆ ಹಣ ಪಾವತಿಯಾಗಿರಲಿಲ್ಲ. ಆರೋಪಿಗಳು ಫೋನ್ ಸ್ವಿಚ್ ಆ್ ಮಾಡಿಕೊಂಡಿದ್ದರು. ಫ್ಲ್ಯಾಟ್‌ಗೆ ಬಂದು ವಿಚಾರಿಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ಇದೇ ರೀತಿ 42ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ. ಆರೋಪಿಗಳ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿಯೂ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.