ಜ್ಯುವೆಲ್ಲರಿಗೆ ವಂಚಿಸಿದ ದಂಪತಿ, ಮಹಿಳೆ ಸೆರೆ

dampati
Published on

ಗುರುಪುರ: ನಕಲಿ ಚೆಕ್ ಬಳಸಿ ಗುರುಪುರ ಕೈಕಂಬದ ಜ್ಯುವೆಲ್ಲರಿಯೊಂದರಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ವಂಚಿಸಿದ ಕುಪ್ಪೆಪದವಿನ ಮಹಿಳೆಯೊಬ್ಬರನ್ನು ಬಜ್ಪೆ ಪೊಲೀಸರು ಉಳ್ಳಾಲ ಧರ್ಮನಗರದ ಮನೆಯೊಂದರಿಂದ ಬಂಧಿಸಿದ್ದಾರೆ.

ಬಂಧಿತ ಆರೋಪಿ ಫರೀದಾ ಬೇಗಂಗೆ ಸಾಥ್ ನೀಡಿದ್ದ ಪತಿ ರಮೀಝ್ ತಲೆಮರೆಸಿಕೊಂಡಿದ್ದಾನೆ. ಮುತ್ತೂರು ಗ್ರಾಮದ ಮುರ ನಿವಾಸಿಗಳಾದ ಫರೀದಾ ಮತ್ತು ಆಕೆಯ ಪತಿ ರಮೀಝ್ ಕೈಕಂಬದ ಜ್ಯುವೆಲ್ಲರ್ಸ್‌ನಿಂದ 7.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ, ಬ್ಯಾಂಕೊಂದರ ಚೆಕ್ ನೀಡಿದ್ದರು. ಚೆಕ್‌ನಲ್ಲಿರುವ ಸಹಿ ಮತ್ತು ಬ್ಯಾಂಕ್ ಖಾತೆಯಲ್ಲಿರುವ ಸಹಿ ತಾಳೆಯಾಗದಿದ್ದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಬಗ್ಗೆ ಕಳೆದ ವಾರ ಬಜ್ಪೆ ಠಾಣೆಯಲ್ಲಿ ಜ್ಯುವೆಲ್ಲರಿ ಮಾಲೀಕರು ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಧರ್ಮನಗರದ ಮನೆಯಿಂದ ಫರೀದಾಳನ್ನು ಬಂಧಿಸಿರುವ ಬಜ್ಪೆ ಪೊಲೀಸರು, ಪತಿ ರಮೀಝ್‌ಗಾಗಿ ಶೋಧ ಮುಂದುವರಿಸಿದ್ದಾರೆ. ದಂಪತಿ ವಿದೇಶಕ್ಕೆ ಪಲಾಯನಗೈಯಲು ಯತ್ನಿಸಿದ್ದು, ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net