

ಹುಬ್ಬಳ್ಳಿ: ಫೈನಾನ್ಸ್ ವ್ಯವಹಾರದಲ್ಲಿ 60 ಲಕ್ಷ ರೂ. ಪಡೆದು ಮಹಿಳೆಯೊಬ್ಬರಿಗೆ 1.87 ಕೋಟಿ ರೂ. ನಕಲಿ ನೋಟು ನೀಡಿ ವಂಚಿಸಿದ್ದ ಆರೋಪದಡಿ ಮೈಸೂರು ಮೂಲದ ಮೊಹಮ್ಮದ್ ಆಸಿಫ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣೆಯ ಅಶ್ವಿನಿ ಪೆದ್ದವಾಡ ಅವರು ಮಗಳಿಗೆ ಕಟ್ಟಡ ನಿರ್ಮಾಣ ಸಂಸ್ಥೆ ಒದಗಿಸುವ ಸಲುವಾಗಿ ಹಣ ಹೊಂದಿಸಲು ಓಡಾಡುತ್ತಿದ್ದರು. ಇದೇ ವೇಳೆ ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಮೊಹಮ್ಮದ್ ಆಸಿಫ್ ತನ್ನ ಮೂಲ ಹೆಸರು ಬದಲಿಸಿಕೊಂಡು ಸುಧೀರ ಮೆಹರಾ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ, ತನಗೆ ಸಾಕಷ್ಟು ಬಂಡವಾಳ ಹೂಡಿಕೆದಾರರು ಹಾಗೂ ಫೈನಾನ್ಸ್ ವ್ಯವಹಾರಸ್ಥರು ಪರಿಚಯ
ಇದ್ದಾರೆ ಎಂದು ಹೇಳಿಕೊಂಡಿದ್ದ. ದಿನಕಳೆದಂತೆ ಮೊಹಮ್ಮದ್ ಬಳಿ ಅಶ್ವಿನಿ ಹಣಕಾಸಿನ ನೆರವು ಕೇಳಿದ್ದರು. ಅಗತ್ಯವಿರುವ 50 ಕೋಟಿ ರೂ. ಹಣ ಕೊಡಿಸುವುದಾಗಿ ಭರವಸೆ ನೀಡಿದ್ದ ಮೊಹಮ್ಮದ್, ಬೇರೆ ಬೇರೆ ಕಂಪನಿಗಳಿಗೆ ಹಣ ಕೊಡಿಸಿದ್ದರ ಕುರಿತು ನಕಲಿ ದಾಖಲೆಗಳನ್ನು ತೋರಿಸಿ ಅಶ್ವಿನಿ ಅವರನ್ನು ನಂಬಿಸಿದ್ದ ಎಂದರು.
ಹಣ ನೀಡುವುದಾಗಿ ಹೇಳಿ ಹುಬ್ಬಳ್ಳಿಗೆ ಬರುವಂತೆ ಅಶ್ವಿನಿಗೆ ತಿಳಿಸಿದ್ದ. 50 ಕೋಟಿ ರೂ.ಗೆ ಇತರ ಶುಲ್ಕವೆಂದು ಮುಂಗಡವಾಗಿ 60 ಲಕ್ಷ ರೂ. ನೀಡಬೇಕು ಎಂದು ಷರತ್ತು ವಿಧಿಸಿದ್ದ. ಅದೇ ಪ್ರಕಾರವಾಗಿ ಅಶ್ವಿನಿ ಅವರು 60 ಲಕ್ಷ ರೂ. ನೀಡಿದ್ದರು. ಅಂದು ಸಂಜೆಯೇ ಮೊದಲ ಹಂತವಾಗಿ 2 ಕೋಟಿ ರೂ. ಪೈಕಿ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಬಳಿ 1.87 ಕೋಟಿ ರೂ. ಹಣವಿದ್ದ ಎರಡು ಬ್ಯಾಗ್ ಅಶ್ವಿನಿ ಅವರಿಗೆ ಮೂರನೇ ವ್ಯಕ್ತಿ ತಲುಪಿಸಿದ್ದ. ಅಶ್ವಿನಿ ಅವರು ತಮ್ಮ ಹೋಟೆಲ್‌ಗೆ ಹೋಗಿ ಹಣ ಎಣಿಸುವ ವೇಳೆ ಮೊಹಮ್ಮದ್ ಕೊಟ್ಟಿರುವ ಹಣ ನಕಲಿ ಎಂಬುದು ಗೊತ್ತಾಗಿದೆ ಎಂದರು.
500 ರೂ. ಮುಖ ಬೆಲೆಯ ನೋಟಿನ ಕಂತೆಗಳ ಮೇಲೆ ಮತ್ತು ಕೆಳಗಡೆ ಒಂದೇ ಅಸಲಿ ನೋಟು ಇಟ್ಟು, ಒಳಗಡೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾದ ನಕಲಿ ನೋಟು ಕೊಟ್ಟು ಯಾಮಾರಿಸಿದ್ದಾನೆ. ಆರೋಪಿ ನೀಡಿದ ಹಣದಲ್ಲಿ 1,87,45,000 ರೂ. ನಕಲಿ ನೋಟು ಇವೆ ಎಂದರು.
ಈ ಸಂಬಂಧ ಅಶ್ವಿನಿ ಅವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮುರುಡೇಶ್ವರದ ಬಳಿ ತಲೆ ಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ಆಸಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಚೀಟಿಂಗ್ ಮತ್ತು ಖೋಟಾ ನೋಟು ಚಾಲನೆಯ ಆರೋಪದಡಿ ದೂರು ದಾಖಲಿಸಿಕೊಂಡು ಮಂಗಳವಾರ ರಾತ್ರಿಯೇ ನ್ಯಾಯಾಧೀಶರೆದುರು ಆರೋಪಿಯನ್ನು ಹಾಜರು ಪಡಿಸಲಾಗಿದೆ ಎಂದರು.
ಮೆಹಮೂದ್ 2017-18ರಲ್ಲಿ ಬೆಂಗಳೂರಿನಲ್ಲೂ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ, ತಮಿಳುನಾಡಿನ ಮುದ್ರಣಾಲಯದಿಂದ ಖೋಟಾ ನೋಟು ಖರೀದಿಸಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ ಎಂದ ಅವರು, ಆರೋಪಿಯಿಂದ ಎರಡು ಮೊಬೈಲ್ ಫೋನ್, ಹಣ ಹಾಗೂ ಕಾರ್ ವಶಪಡಿಸಿಕೊಳ್ಳಲಾಗಿದೆ ಎಂದರು.
ದೊಡ್ಡ ಮೊತ್ತದ ಹಣದ ಅವಶ್ಯಕತೆ ಇರುವವರನ್ನೇ ಟಾರ್ಗೆಟ್ ಮಾಡಿ ಮೊಹಮ್ಮದ್ ವಂಚಿಸುತ್ತಿದ್ದ. ವಿಚಾರಣೆ ವೇಳೆ ಪೊಲೀಸರು ಟಾರ್ಚರ್ ಕೊಡುತ್ತಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ಹೇಳುವುದಾಗಿ ಹೆದರಿಸುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸುತ್ತಿದ್ದ. ಈತನಿಂದ ಇನ್ನಷ್ಟು ಮಾಹಿತಿ ಪಡೆಯಲು ಸೂಕ್ಷ್ಮವಾಗಿ ವಿಚಾರಣೆ ನಡೆಸುವುದಾಗಿ ಎನ್. ಶಶಿಕುಮಾರ ತಿಳಿಸಿದರು.