500 ಕೋಟಿ ರೂಪಾಯಿ ಇದೆ ದುಪ್ಪಟ್ಟು ಹಣ ಕೊಡ್ತೇವೆ ಎನ್ನುತ್ತ 6.5 ಲಕ್ಷ ರೂಪಾಯಿ ಪಡ್ಕೊಂಡು ಪರಾರಿ

Rice pulling
Published on

ಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಬ್ಯಾಂಕ್‌ನಲ್ಲಿ 500 ಕೋಟಿ ರೂ. ಇದ್ದು ಡ್ರಾ ಮಾಡಲು ಶುಲ್ಕ ಪಾವತಿಸಬೇಕು. ಹಣ ನೀಡಿದರೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ 6.5 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.

ತೆಲಂಗಾಣದ ರಂಗಾರೆಡ್ಡಿನಗರ ಮೂಲದ ರಾಮ್ ಬಾಬು(53) ವಂಚನೆಗೆ ಒಳಗಾದವರು.ಆರೋಪಿಗಳಾದ ಸೆಂಥಿಲ್ ಕುಮಾರ್, ಕಾರ್ತಿಕ್ ಮತ್ತು ರಾಜು ಎಂಬುವರ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಂಡಿರವುದಾಗಿ ಬಂಡೇಪಾಳ್ಯ ಪೊಲೀಸರು ತಿಳಿಸಿದ್ದಾರೆ.

2018ರಲ್ಲಿ ರಾಮ್ ಬಾಬುಗೆ ಆಕಸ್ಮಿಕವಾಗಿ ರಾಜು ಎಂಬಾತ ಪರಿಚಯವಾಗಿದ್ದ. ನಂತರ ರಾಮ್‌ಗೆ ಕರೆ ಮಾಡಿದ ರಾಜು, ತನಗೆ ಪರಿಚಯ ಇರುವ ಸೆಂಥಿಲ್, ಕಾರ್ತಿಕ್ ಎಂಬುವರಿಗೆ ಸೇರಿದ ಹಣ ಕೊಲ್ಲಿ ರಾಷ್ಟ್ರದ ಅಲ್ ಅಮಿನ್ ಬ್ಯಾಂಕ್ ಖಾತೆಯಲ್ಲಿ ಲಾಕ್ ಆಗಿದೆ.

ಸದ್ಯ ಅವರಿಗೆ ಹಣದ ಅವಶ್ಯಕತೆ ಇದೆ. ಈಗ ಧನಸಹಾಯ ಮಾಡಿದರೆ ವಾಪಸ್ ಹೆಚ್ಚಿನ ಹಣ ಕೊಡುತ್ತಾರೆ ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ರಾಮ್, ಕಾರಿನಲ್ಲಿ ಬೆಂಗಳೂರಿಗೆ ಬಂದು ಸೋಮಸಂದ್ರಪಾಳ್ಯದ ಬಿರ್ಲಾ ಜಂಕ್ಷನ್‌ನಲ್ಲಿ ರಾಜು ಮತ್ತು ಆತನ ಸಹಚರರನ್ನು ಭೇಟಿ ಮಾಡಿದ್ದಾರೆ. ಆಗ ಸೆಂಥಿಲ್ ಮತ್ತು ಕಾರ್ತಿಕ್, ನಾವು ರೈಸ್ ಪುಲ್ಲಿಂಗ್ ಮತ್ತು ರೆಡ್ ಮರ್ಕ್ಯೂರಿ ವ್ಯವಹಾರ ನಡೆಸುತ್ತಿದ್ದೇವೆ. ಅಲ್ ಅಮಿನ್ ಬ್ಯಾಂಕ್‌ನಲ್ಲಿ ಐನೂರು ಕೋಟಿ ರೂ. ಲಾಕ್ ಆಗಿದೆ. ಅದನ್ನು ಬಿಡಿಸಿಕೊಳ್ಳಲು ಮೊದಲು ಶುಲ್ಕ ಕಟ್ಟಬೇಕಾಗಿದೆ. ತಮ್ಮ ಬಳಿ ಹಣ ಇಲ್ಲವೆಂದು ಹೇಳಿದ್ದಾರೆ.

ಆಗ ರಾಮ್ 1.50 ಲಕ್ಷ ರೂ.ಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ನ.2ರಂದು ಸೆಂಥಿಲ್ ಮೊಬೈಲ್‌ಗೆ ಕರೆ ಮಾಡಿ ರಾಮ್ ಬಾಬು ವಿಚಾರಿಸಿದಾಗ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹಣ ವರ್ಗಾವಣೆ ಆಗಿದೆ ಎಂದು ನಕಲಿ ದಾಖಲೆ ತೋರಿಸಿ ಮತ್ತೆ 5 ಲಕ್ಷ ರೂ. ಪಡೆದುಕೊಂಡಿದ್ದಾನೆ. ಕೆಲದಿನಗಳ ನಂತರ ಮತ್ತೆ ಕೇಳಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ನೊಂದ ರಾಮ್ ಬಾಬು, ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net