

ಚಿಕ್ಕಬಳ್ಳಾಪುರ: ಚಿಂತಾಮಣಿಯ ಜನರಿಂದ ಉಳಿತಾಯ ಚೀಟಿ ಮತ್ತು ಲಾಭದ ಹೆಸರಿನಲ್ಲಿ ಕೋಟ್ಯಂತರ ರೂ ಹಣವನ್ನು ವಸೂಲಿ ಮಾಡಿದ ಅಸ್ಸಾಂ ಮೂಲದ ದಂಪತಿ, ರಾತ್ರೋ ರಾತ್ರಿ ಮನೆಯನ್ನು ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.
ಚಿಂತಾಮಣಿ ನಗರದ ಬೆಂಗಳೂರು ರಸ್ತೆಯ ಕನ್ನಂಪಲ್ಲಿಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಪ್ಪಿಸಿಂಗ್ (38) ಹಾಗೂ ಬೊಪ್ಪಿಸಿಂಗ್ (48) ಆರೋಪಿಗಳು. ಕಷ್ಟಕಾಲದಲ್ಲಿ ನೆರವಿಗೆ ಬರಲಿ ಎಂಬ ಭಾವನೆಯಲ್ಲಿ ಚೀಟಿ ಕಟ್ಟಿ, ಮೂರು ಪಂಗನಾಮ ಹಾಕಿಸಿಕೊಂಡ ಜನರು, ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬರೋಬ್ಬರಿ 3.26 ಕೋಟಿ ರೂಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂಬುದಾಗಿ ಆರೋಪಿಸಲಾಗಿದೆ.
* ಕೋಟ್ಯಂತರ ರೂ ವಂಚನೆ
ಕಳೆದ 10 ವರ್ಷಗಳಿಂದಲೂ ಸೇರಿದಂತೆ ವಿವಿಧೆಡೆ ಮನೆಗಳಲ್ಲಿ ಬಾಡಿಗೆಗೆ ವಾಸವಾಗಿದ್ದ ದಂಪತಿ, ಮೊದಲು ಇಲ್ಲಿನ ಕಟಮಾಚನಹಳ್ಳಿ ಕ್ರಾಸ್ ಬಳಿ ಇರುವ ಖಾಸಗೀ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಕನ್ನಂಪಲ್ಲಿ ಸರ್ಕಲ್ ನಲ್ಲಿ ಎರಡು ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದು ದಿನಸಿ ವ್ಯಾಪಾರ ನಡೆಸುತ್ತಿದ್ದರು. ಇದೇ ವೇಳೆ ಸಣ್ಣಪುಟ್ಟ ಹಣಕಾಸಿನ ನೆರವು, ಉಳಿತಾಯ ಮತ್ತು ಪಟಾಕಿ, ವರಮಹಾಲಕ್ಷಿ ಸೇರಿದಂತೆ ಇತರೆ ಚೀಟಿ ವ್ಯವಹಾರಗಳನ್ನು ಕೈಗೊಂಡಿದ್ದು ಪ್ರತಿ ತಿಂಗಳು ಕನಿಷ್ಠ 500 ರಿಂದ 10 ಸಾವಿರ ರೂಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು. ಇದಕ್ಕೆ ದುಬಾರಿ ಬಡ್ಡಿ ಸಮೇತ ಹಣ ಕೊಡುವುದಾಗಿ ನಂಬಿಸುತ್ತಿದ್ದರು. ಇದರ ನಡುವೆ ಹಲವರಿಂದ 3,26,94,500 ರೂ ಸಂಗ್ರಹಿಸಿಕೊಂಡು ಪರಾರಿಯಾಗಿದ್ದಾರೆ.
* ಮನೆ ಬಾಗಿಲಿಗೆ ಬೀಗ
ಕಳೆದ ಜು.25 ರಂದು ಜನರಿಗೆ ಬಡ್ಡಿ ಸಮೇತ ಹಣವನ್ನು ಪಾವತಿಸಬೇಕಾಗಿದ್ದು ಜು.20 ರಂದು ರಾತ್ರಿ ಬಾಡಿಗೆ ಮನೆಗೆ ಬೀಗ ಹಾಕಿಕೊಂಡು ದಂಪತಿ ಎಸ್ಕೇಪ್ ಆಗಿದ್ದಾರೆ. ಬಾಡಿಗೆ ಮನೆಯಲ್ಲೂ, ಅಂಗಡಿಯಲ್ಲೂ ಇಲ್ಲದಿರುವುದನ್ನು ಕಂಡು, ಹಣದ ನಿರೀಕ್ಷೆಯಲ್ಲಿ ಹಲವು ಬಾರಿ ಬಂದವರು, ಆರೋಪಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಇದಕ್ಕೆ ನಗರ ಠಾಣೆಗೆ ತೆರಳಿ ಜನರು ದೂರು ನೀಡಿದ್ದಾರೆ. ಪೊಲೀಸರು ಚಾಲಾಕಿ ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
* ಬಹುತೇಕ ಮಹಿಳೆಯರಿಗೆ ವಂಚನೆ
ಚೀಟಿ ವ್ಯವಹಾರದಲ್ಲಿ ದಂಪತಿ, ಬಹುತೇಕ ಮಹಿಳೆಯರಿಗೆ ವಂಚಿಸಿರುವುದು ಗೊತ್ತಾಗಿದೆ. ಇಲ್ಲಿನ ಮಂಜುಳಾ ಆಂಜನೇಯರೆಡ್ಡಿ ರವರ 34 ಲಕ್ಷ ರೂ, ಲಲಿತಮ್ಮ 32.92 ಲಕ್ಷ ರೂ, ಮಂಜುಳಾ ರಮೇಶ್ 2.52 ಲಕ್ಷ ರೂ, ರತ್ನ 18.40 ಲಕ್ಷ ರೂ ಸೇರಿದಂತೆ ಅನೇಕ ಮಹಿಳೆಯರು ಲಕ್ಷಾಂತರ ರೂ ಹಣವನ್ನು ಕಳೆದುಕೊಂಡಿದ್ದಾರೆ.