ಮೋಸದಿಂದ ಎಟಿಎಂ ಕಾರ್ಡ್​ ಬದಲಾಯಿಸಿ ಹಣ ಡ್ರಾ ಮಾಡುತ್ತಿದ್ದ ಆರೋಪಿ

Crime Logo
Published on

ಬಂಕಾಪುರ: ಎಟಿಎಂ ಕಾರ್ಡ್​ ತೆಗೆದುಕೊಡುವ ರೀತಿಯಲ್ಲಿ ನಟನೆ ಮಾಡಿ ಸಾರ್ವಜನಿಕರ ಎಟಿಎಂ ಬದಲಾಯಿಸಿ ಮೋಸದಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಅಂತಾರಾಜ್ಯ ಕಳ್ಳತನನ್ನು ಇಲ್ಲಿಯ ಬಂಕಾಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಗ್ರಾಮದ ಕಿರಣಕುಮಾರ ಕಾಳೆಗೌಡ (32) ಬಂಧಿತ ಆರೋಪಿ.

ಈತ ಕಳೆದ ವಾರ ಬಂಕಾಪುರದಲ್ಲಿ ಮಲ್ಲೇಶಪ್ಪ ದೊಡ್ಡಮನಿ ಎಂಬವರು ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ತಾನೂ ಕಾರ್ಡ್​ ತೆಗೆದುಕೊಳ್ಳುವ ನೆಪದಲ್ಲಿ ಮಲ್ಲೇಶಪ್ಪ ಅವರ ಕಾರ್ಡ್​ ಬದಲಾಯಿಸಿ ಅದರಿಂದ 75 ಸಾವಿರ ರೂ.ಅನ್ನು ಡ್ರಾ ಮಾಡಿಕೊಂಡಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ 47 ಸಾವಿರ ರೂ. ನಗದು, 1 ಮೊಬೈಲ್​, 60ಕ್ಕೂ ಅಧಿಕ ಎಟಿಎಂ ಕಾರ್ಡ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಕಿರಣಕುಮಾರ ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣಗೊಳಿಸುತ್ತೇನೆ ಎಂದು ಹೋಟೆಲ್​ ಮಾಲೀಕರು, ಅನಕ್ಷರಸ್ತರು, ಮಹಿಳೆಯರು, ಮಕ್ಕಳು, ಅಮಾಯಕರು, ವಯೋವೃದ್ಧರನ್ನು ಗುರಿಯಾಗಿಸಿಕೊಂಡು ಅವರಿಗೆ ಸಹಾಯ ಮಾಡುವ ನೆಪದಲ್ಲಿ ಪಿನ್​ ನಂಬರ್​ ತಿಳಿದುಕೊಂಡು ಎಟಿಎಂ ಕಾರ್ಡ್​ ಬದಲಾಯಿಸಿ ಮೋಸ ಮಾಡಿ ಹಣ ತೆಗೆಯುತ್ತಿದ್ದ. ಈತನ ವಿರುದ್ಧ ಹಾಸನದ ದುಡ್ಡಾ ಪೊಲೀಸ್​ ಠಾಣೆ, ಕೊಡಗು, ಚಾಮರಾಜನಗರ, ಕುಮಟಾ, ಉಡುಪಿ, ದಾವಣಗೆರೆ, ಶಿರಾಳಕೊಪ್ಪ ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಪಿಎಸ್​ಐಗಳಾದ ನಿಂಗರಾಜ ಕರಕಣ್ಣನವರ, ಎಸ್​.ಎಂ. ವನಹಳ್ಳಿ, ಸಿಬ್ಬಂದಿಯಾದ ಕೆ. ರಜನಿ, ಎ.ಕೆ. ನದಾ, ಗೋವಿಂದ ಲಮಾಣಿ, ವೆಂಕಟೇಶ ಲಮಾಣಿ, ಬೀರಪ್ಪ ಕಳ್ಳಿಮನಿ, ನಿಂಗಪ್ಪ ಪೂಜಾರ, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net