ಚಾವುಂಡರಾಯ ಪ್ರದರ್ಶನ 28ರಂದು

WEB 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಅಭಿನಯ ಭಾರತಿ ಸಂಸ್ಥೆ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಮೇ. 28ರಂದು ಸಂಜೆ 6 ಗಂಟೆಗೆ ‘ಚಾವುಂಡರಾಯ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಆಯೋಜಕ ಅರವಿಂದ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ವಿಜಯಾ ಅರವಿಂದ ಜೋಶಿ ನೆನಪಿಗಾಗಿ ಏರ್ಪಡಿಸಿರುವ ಪ್ರದರ್ಶನವನ್ನು ಅಮೇಜಾನ್‌ನ ಕರ್ನಾಟಕದ ಅಧಿಕಾರಿ ವಿಕಾಸ ಜೋಶಿ ಉದ್ಘಾಟಿಸುವರು. ಜಯರಾಮ್ ರಾಯಾಪುರ ರಚನೆಯ ನಾಟಕವನ್ನು ಶೇಷಗಿರಿ ಕಲಾ ತಂಡ ಪ್ರದರ್ಶಿಸಲಿದೆ. ಡಾ. ಶ್ರೀಪಾದ ಭಟ್, ಗಣೇಶ ಹೆಗ್ಗೋಡ, ಲಕ್ಷ್ಮಣ ರೊಟ್ಟಿ, ಸಂಗೀತ ನಿರ್ದೇಶನ, ಹರೀಶ ಗುರಪ್ಪನವರ ಬೆಳಕು ವಿನ್ಯಾಸ ನೀಡಲಿದ್ದಾರೆ ಎಂದರು.
ಕರ್ನಾಟಕದ ಪ್ರತಿಷ್ಠಿತ ರಂಗ ಸಂಸ್ಥೆಯಾದ ಅಭಿನಯ ಭಾರತಿ ಸರ್ಕಾರದ ಅನುದಾನ ಇಲ್ಲದೆ 42 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. 42ನೇ ವರ್ಷಕ್ಕೆ ಸಂಸ್ಥೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಹೊಸ ಯೋಜನೆಗಳನ್ನು ಆರಂಭಿಸಲು ಚಿಂತಿಸಲಾಗಿದೆ. ಹೊಸ ಸದಸ್ಯತ್ವ ಯೋಜನೆ, ಗುಣಮಟ್ಟದ ನಾಟಕ ಪ್ರದರ್ಶನ, ನೃತ್ಯ, ಸಂಗೀತ ಮತ್ತು ಉಪನ್ಯಾಸ, ಸನ್ಮಾನ ಪ್ರಶಸ್ತಿ ಸಮಾರಂಭ, ತರಬೇತಿಗಳನ್ನು ನೀಡಲು ಉದ್ದೇಶಿಸಿದೆ. ಇದರ ಭಾಗವಾಗಿಯೇ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ವಿಶ್ವನಾಥ ಕೋಳಿವಾಡ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net