

ಅಳವಂಡಿ: ಕೃಷಿ ಚಟುವಟಿಕೆಯಲ್ಲಿ ಖರ್ಚು ಜಾಸ್ತಿಯಾಗಿದ್ದರಿಂದ ರೈತರಿಗೆ ಲಾಭ ಸಿಗುವುದು ಕಡಿಮೆಯಾಗಿದೆ. ಆದರೆ, ಬಿಸರಳ್ಳಿ ರೈತ ಮಂಜುನಾಥ ಸಿಂದೋಗಿ ನೀರಾವರಿ ಜಮೀನಿನಲ್ಲಿ ಕಡಿಮೆ ಖರ್ಚಿನಲ್ಲಿ ಚವಳಿಕಾಯಿ ಬೆಳೆದು ಹೆಚ್ಚು ಲಾಭ ಪಡೆಯುವುದರ ಮೂಲಕ ಮಾದರಿಯಾಗಿದ್ದಾರೆ.
ಪ್ರಮುಖ ತರಕಾರಿ ಬೆಳೆಯಲ್ಲಿ ಚವಳಿಕಾಯಿ ಒಂದು. ಇದು ವರ್ಷಪೂರ್ತಿ ಬೆಳೆಯುವ ಬೆಳೆಯಾಗಿದ್ದು, ಇದರಲ್ಲಿ ನಾರಿನಂಶ ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ರೈತ ಮಂಜುನಾಥ ಕಳೆದ ಹತ್ತು ಹನ್ನೆರಡು ವರ್ಷದಿಂದ ಚವಳಿಕಾಯಿ ಬೆಳೆಯುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಕೃಷಿ ಕಾರ್ಮಿಕರ ಕೊರತೆ ಇರುವುದರಿಂದ ಬಿಟಿ ಹತ್ತಿ ಸಾಲುಗಳ ಮದ್ಯ ಬೆಳೆಯುತ್ತಾರೆ. ಬೇಸಿಗೆ ಸಮಯದಲ್ಲಿ ಪೂರ್ತಿ ಜಮೀನಿನಲ್ಲಿ ಚವಳಿ ಬೆಳೆಯುತ್ತಾರೆ. 1.5 ಎಕರೆ ಜಮೀನಿಗೆ ಒಂಬತ್ತು ಕೆಜಿ ಚವಳಿ ಬೀಜಗಳು ಬಿತ್ತಲಾಗುತ್ತದೆ. ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ 400 ರೂ.ದರವಿದೆ. ರಾಸಾಯನಿಕ ಗೊಬ್ಬರ, ಮತ್ತು ಕ್ರಿಮಿನಾಶಕ ಸಿಂಪಡನೆ ಖರ್ಚು 6000 ರೂ.ಗಳು. ಬಿತ್ತನೆಗೆ 1500ರೂ. ಖರ್ಚು, ಕೂಲಿ ಕಾರ್ಮಿಕರ ಖರ್ಚು ಇತರೆ ಖರ್ಚು ಸೇರಿ ಒಂದು ಬೆಳೆಗೆ ಸುಮಾರು 50 ಸಾವಿರ ರೂ. ಖರ್ಚು ಬರಲಿದೆ.
ಬಿತ್ತನೆ ಮಾಡಿದ 30 ದಿನಗಳ ನಂತರ ಚವಳಿ ಬೆಳೆ ಫಸಲ ಬರಲು ಆರಂಭವಾಗುತ್ತದೆ. ನಂತರ ಸುಮಾರು ಎಂಟು ಬಾರಿ ಕಟಾವಿಗೆ ಬರಲಿದೆ. ಆರಂಭದಲ್ಲಿ ಮೂರು ಕ್ವಿಂಟಾಲ್, ನಂತರ 15 ಕ್ವಿಂಟಾಲ್‌ವರೆಗೆ ಬರಲಿದೆ. ಹುಬ್ಬಳ್ಳಿ, ಬೆಳಗಾವಿ, ಗದಗ ಮುಂತಾದ ನಗರಗಳಿಗೆ ಮಾರಾಟ ಮಾಡಲಾಗುತ್ತಿದೆ. ಕ್ವಿಂಟಾಲ್‌ಗೆ ಐದು ಸಾವಿರ ರೂ.ದಿಂದ ಎಂಟು ಸಾವಿರ ರೂ.ಗಳವರೆಗೆ ಮಾರಾಟವಾಗಲಿದೆ. ಬೇಡಿಕೆಗೆ ಅನುಗುಣವಾಗಿ ದರದಲ್ಲಿ ಹೆಚ್ಚು ಕಡಿಮೆಯಾಗಲಿದೆ. ಒಟ್ಟು 1.5 ಎಕರೆಯಲ್ಲಿನ ಚವಳಿ ಮಾರಾಟದಿಂದ ಸುಮಾರು ಎರಡು ಲಕ್ಷ ಆದಾಯ ಬರಲಿದ್ದು, ಖರ್ಚು ಕಳೆದು 1.5ಲಕ್ಷ ಉಳಿಯಲಿದೆ ಎನ್ನುತ್ತಾರೆ ರೈತ.