

ನಾಲತವಾಡ: ದೇವಿ ಪುರಾಣವು ಆಧ್ಯಾತ್ಮಿಕ ಜ್ಞಾನವನ್ನು ವರ್ಣಿಸುತ್ತದೆ. ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳ ಸಾಧನೆಗೆ ಮಾರ್ಗದರ್ಶನ ನೀಡುತ್ತದೆ ಎಂದು ಇಂಗಳೇಶ್ವರ ವಚನ ಶಿಲಾ ಮಂಟಪದ ಚನ್ನಬಸವ ಶ್ರೀಗಳು ಹೇಳಿದರು.
ಸ್ಥಳೀಯ ಜಟ್ಟಿಂಗರಾಯ ದೇವಸ್ಥಾನದ ದೇವಿ ಪುರಾಣದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಅವರು ಆಶೀರ್ವಚನ ನೀಡಿದರು.
ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ದೇವಿ ಪುರಾಣವು ಜನರನ್ನು ಅಧ್ಯಾತ್ಮ ಜೀವನದ ಕಡೆ ವಾಲುವಂತೆ ಮಾಡುತ್ತದೆ. ಪ್ರತಿ ವರ್ಷ ಜಟ್ಟಿಂಗರಾಯ ದೇವಸ್ಥಾನದಲ್ಲಿ ಪುರಾಣ ಹಮ್ಮಿಕೊಳ್ಳುವುದು ಸ್ಮರಣೀಯವಾಗಿದೆ. ದೇವಿ ಅನುಗ್ರಹ ಎಲ್ಲರ ಮೇಲೆ ಇರಲಿ. ಅಧ್ಯಾತ್ಮ ಪಾಲಿಸುವ ಜೊತೆಗೆ ನಿತ್ಯದ ಜೀವನದ ಕಡೆ ನಾವು ಗಮನ ಹರಿಸಬೇಕು. ನಮ್ಮ ಹಿರಿಯರು ಪಾಲಿಸುವ ಆಹಾರ ಪದ್ಧತಿಯನ್ನು ನಾವು ಪಾಲಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮಹಿಳೆಯರು ಇದರ ಕಡೆ ಹೆಚ್ಚು ಗಮನ ಹರಿಸಬೇಕು. ನಿತ್ಯ ಮನೆಯಲ್ಲಿ ಉತ್ತಮ ಆಹಾರ ಪದ್ಧತಿ ಅನುಸರಿಸಿದರೆ ಕುಟುಂಬ ಅತ್ಯಂತ ನೆಮ್ಮದಿ, ಸಂತೋಷ ಹಾಗೂ ಆರೋಗ್ಯದಿಂದ ಇರುತ್ತದೆ ಎಂದರು.
ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬಾಬು ಡೇರೆದ, ಶಿವರುದ್ರಯ್ಯ ಹಿರೇಮಠ ಮಾತನಾಡಿದರು. ವೀರೇಶ ಹಾದಿಮನಿ ನಿರೂಪಿಸಿ ವಂದಿಸಿದರು. ಜುಮ್ಮಣ್ಣ ಜೋಗಿ, ದೇವಿ ಪುರಾಣ ಪ್ರವಚನಕಾರ ಪರಶುರಾಮ ಚೌಡಕೇರ, ಹಣಮಂತ ಕುರಿ, ಮಹಾಂತಯ್ಯ ಮೆನದಾಳಮಠ, ಡಾ.ಡಿ.ಆರ್.ಮಳಖೇಡ ಇತರರಿದ್ದರು.
ಜಟ್ಟಿಂಗರಾಯ ದೇವಸ್ಥಾನಕ್ಕೆ ಶಾಸಕ ಸಿ.ಎಸ್.ನಾಡಗೌಡ ಅವರು ಸಂಜೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಶಾಸಕರನ್ನು ಸನ್ಮಾನ ಮಾಡಲಾಯಿತು. ದೇವಿ ಭಾವಚಿತ್ರವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.