

ಕುಮಟಾ: ತಾಲೂಕಿನ ಹೆಗಡೆಯ ವಿಪ್ರ ಒಕ್ಕೂಟ ವತಿಯಿಂದ ಸ್ಥಳೀಯ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಚತುರ್ವೇದ ಸ್ವಾಹಾಕಾರ ಮಹಾಯಜ್ಞವು ಜು. 18 ರಿಂದ ಆ. 16ರ ವರೆಗೆ ನಡೆಯಲಿದೆ ಎಂದು ವಿಪ್ರ ಒಕ್ಕೂಟದ ಕಾರ್ಯ ಪರಿಷತ್ತಿನ ಅಧ್ಯಕ್ಷ ಡಾ. ಯು.ಜಿ ಶಾಸ್ತ್ರೀ ತಿಳಿಸಿದ್ದಾರೆ.
ಅಥರ್ವ ಶೀರ್ಷಹವನದೊಂದಿಗೆ ಆರಂಭಗೊಂಡು ಜು. 19ರಿಂದ ಜು. 26ರವರೆಗೆ ಶೃಂಗೇರಿಯ ಘನಪಾಠಿ ವೇದಮೂರ್ತಿ ಎಂ, ವಿ. ಕೃಷ್ಣಮೂರ್ತಿ ಆಚಾರ್ಯತ್ವದಲ್ಲಿ ಋಗ್ವೇದ ಶಾಕಲಶಾಖೆಯ ಸ್ವಾಹಾಕಾರ, ಜು. 27ರಂದು ಗಾಯತ್ರೀಹವನ, ಜು. 28 ರಿಂದ ಆ. 2ರ ವರೆಗೆ ಹೊನ್ನಾವರದ ಕಡೆಹಳ್ಳದ ಕ್ರಮಪಾಠಿ ವೇದಮೂರ್ತಿ ಗಜಾನನ ಭಟ್ಟರ ಆಚಾರ್ಯತ್ವದಲ್ಲಿ ಕೃಷ್ಣ ಯಜುರ್ವೇದ ತೈತ್ತಿರೀಯ ಶಾಖೆಯ ವೇದ ಸ್ವಾಹಾಕಾರ, ಆ. 3 ರಿಂದ ಆ. 8 ವರೆಗೆ ಹೊನ್ನಾವರ ಆರೊಳ್ಳಿಯ ವೇದಮೂರ್ತಿ ವಿನಾಯಕ ಸುಬ್ರಾಯ ಭಟ್ಟರ ಆಚಾರ್ಯತ್ವದಲ್ಲಿ ಸಾಮವೇದ ರಾಣಾಯನೀಯ ಶಾಖೆಯ ವೇದ ಸ್ವಾಹಾಕಾರ, ಆ.9ರಂದು ಪಂಚಾಯತನ ದೇವತೆಗಳ ಮೂಲ ಮಂತ್ರಹವನ, ನವಗ್ರಹ ಹವನ, ಆ.10 ರಿಂದ 14 ರ ವರೆಗೆ ಕೋಣಾರೆಯ ವೇದಮೂರ್ತಿ ರಮೇಶ ವರ್ಧನ್ ಆಚಾರ್ಯತ್ವದಲ್ಲಿ ಅಥರ್ವವೇದ ಶೌನಕ ಶಾಖೆಯ ವೇದಸ್ವಾಹಾಕಾರ, ಆ.15 ರಂದು ಕನಕಮಹಾಲಕ್ಷ್ಮೀ ಹವನ, ಆ.16 ರಂದು ಪುರುಷಸೂಕ್ತ, ಶ್ರೀ ಸೂಕ್ತಹವನ ಹಮ್ಮಿಕೊಳ್ಳಲಾಗಿದೆ. ಮಾತೆಯರಿಂದ ಕುಂಕುಮಾರ್ಚನೆ, ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.