

ಗೋಕರ್ಣ: ನಲವತ್ತೆರಡು ದಿನಗಳ ಚಾತುರ್ವಸ್ಯ ವ್ರತವನ್ನು ಯಶೋಪೂರ್ಣವಾಗಿ ಸಮಾಪನಗೊಳಿಸಿದ ಶ್ರೀರಾಮ ಕ್ಷೇತ್ರದ ಪೀಠಾಧಿಪತಿಗಳಾದ ಮಹಾಮಂಡಲೇಶ್ವರ ಶ್ರೀಬ್ರಹ್ಮಾನಂದ ಮಹಾಸ್ವಾಮೀಜಿ ಶುಕ್ರವಾರ ಕ್ಷೇತ್ರಕ್ಕೆ ಬಿಜಯಂಗೈದು ಪುರಾಣೋಕ್ತ ದೇವತಾ ಸನ್ನಿಧಿಗಳಲ್ಲಿ ವಿಶೇಷ ಪೂಜಾಭಿಷೇಕ ಸಲ್ಲಿಸಿದರು.
ಕ್ಷೇತ್ರ ಪದ್ಧತಿಯಂತೆ ಶ್ರೀಗಳನ್ನು ಶ್ರೀ ಮಹಾಗಣಪತಿ ಮಂದಿರದ ಸಮ್ಮುಖ ಕ್ಷೇತ್ರದ ಪ್ರಧಾನ ಅರ್ಚಕರು ಮತ್ತು ಆನುವಂಶೀಯ ಉಪಾಧಿವಂತ ವೈದಿಕರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳ ಅಧ್ಯಕ್ಷ ಮತ್ತು ಪ್ರಧಾನ ಅರ್ಚಕ ವೇ. ರಾಜಗೋಪಾಲ ಅಡಿ ಮತ್ತಿತರರ ನೇತೃತ್ವದಲ್ಲಿ ಮೊದಲು ಶ್ರೀ ಮಹಾಗಣಪತಿಗೆ ಶ್ರೀಗಳವರು ದೂರ್ವಾರ್ಚನೆ ಸಹಿತ ಪಂಚಾಮೃತ ಪೂಜೆ ಕೈಗೊಂಡರು. ಅಲ್ಲಿಂದ ಶ್ರೀಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿದ ಬ್ರಹ್ಮಾನಂದ ಶ್ರೀಗಳು ಪರಶಿವ ಆತ್ಮಲಿಂಗಕ್ಕೆ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಸಮರ್ಪಿಸಿದರು.
ಮಂದಿರದ ನಂದಿಮಂಟಪದಲ್ಲಿ ಶ್ರೀ ಮಹಾಬಲ ಸ್ವರ್ಣನಾಗಾಭರಣಕ್ಕೆ ಈ ವರ್ಷದ ವಿಶ್ವಾವಸು ಸಂವತ್ಸರದ ಚಾತುರ್ವಸ್ಯ ಸರ್ವ ಯಶಸ್ಸಿನಿಂದ ಸಂಪನ್ನವಾದ ಪ್ರಯುಕ್ತ ಶ್ರೀ ದೇವರಲ್ಲಿ ಲೋಕಲ್ಯಾಣಾರ್ಥ ವಿಶೇಷ ಪ್ರಾರ್ಥನೆಯೊಂದಿಗೆ ಶ್ರೀಗಳು ಮಹಾಮಂಗಳಾರತಿ ಬೆಳಗಿದರು. ಪ್ರಧಾನ ಅರ್ಚಕರಾದ ವೇ.ರಾಜಗೋಪಾಲ ಅಡಿ ನೇತೃತ್ವದಲ್ಲಿ ವೇ. ಗುರುದತ್ತ ಹಿರೇ, ವೇ.ಶ್ರೀನಿವಾಸ ಅಡಿ, ವೇ.ಮಹೇಶ ಅಡಿ, ವೇ.ಶಂಕರ ಗೋಪಿ ಮತ್ತು ಉಪಾಧಿವಂತ ವೈದಿಕರು ದೇವತಾ ಪೂಜೆ ನಿರ್ವಹಿಸಿದರು. ಮಂದಿರದ ವತಿಯಿಂದ ಸಮಿತಿ ಸದಸ್ಯ ಮಹೇಶ ಹಿರೇಗಂಗೆ, ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ ಶ್ರೀಗಳನ್ನು ಗೌರವಿಸಿದರು. ಶ್ರೀ ಪಾರ್ವತಿ ಮಂದಿರಕ್ಕೆ ಭೇಟಿಯಿತ್ತು ಅಲ್ಲಿ ನಡೆದ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿಯಲ್ಲಿ ಗುರುವರ್ಯರು ಭಾಗವಹಿಸಿದರು.
ಶ್ರೀಗಳ ದರ್ಶನಕ್ಕಾಗಿ ಆಗಮಿಸಿದ ಅಪಾರ ಭಕ್ತರನ್ನು ಉದ್ದೇಶಿಸಿ ಆಶೀರ್ವಾದವನ್ನಿತ್ತ ಶ್ರೀ ಬ್ರಹ್ಮಾನಂದ ಗುರುಗಳು ಗೋಕರ್ಣಕ್ಷೇತ್ರ ನಮಗೆ ದೀಕ್ಷೆಯನ್ನು ಸ್ವೀಕರಿಸಿ ಪೀಠಾಧಿಪತಿಗಳಾಗಲು ಹರಸಿದ ನಮ್ಮ ಗುರುವರ್ಯರಾಗಿದ್ದ ಶ್ರೀ ಶಾಂಡಿಲ್ಯ ಮಹಾರಾಜರ ಮುಕ್ತಿಧಾಮವಾಗಿದೆ. ಅವರ ಪಾವನ ಸಮಾಧಿ ಸ್ಥಳದ ಪುಣ್ಯಭೂಮಿಯಲ್ಲಿ ಶ್ರೀ ದೇವತಾರ್ಚನೆ ಕೈಗೊಂಡಿರುವುದು ನನ್ನ ಪೂರ್ವ ಸುಕೃತ ಪುಣ್ಯ ಫಲವಾಗಿದೆ. ನಮ್ಮ ಗುರುವರ್ಯರು ಹರಸಿರುವ ಈ ಪವಿತ್ರ ಕ್ಷೇತ್ರಕ್ಕೆ ಬಂದು ನಮ್ಮೊಂದಿಗೆ ಶ್ರೀದೇವರ ದರ್ಶನ ಭಾಗ್ಯ ಪಡೆದ ನಿಮ್ಮೆಲ್ಲರಿಗೆ ಶ್ರೀಗಳ ಆಶೀವಾದದಿಂದ ಅನವರತ ಶುಭವಾಗಲಿ ಎಂದು ಶ್ರೀಗಳು ಆಶೀರ್ವಾದ ನೀಡಿದರು.
ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಉಪಾಧ್ಯಕ್ಷ ಅರುಣ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ,ನಿರ್ದೇಶಕರಾದ ನಿತ್ಯಾನಂದ ನಾಯ್ಕ, ನಾಗೇಂದ್ರ ನಾಯ್ಕ, ಎಚ್.ಆರ್. ನಾಯ್ಕ, ವ್ಯವಸಾಯ ಸಹಕಾರಿ ಸಂಘದ ಉಪಾಧ್ಯಕ್ಷ ತೇಜಸ್ವಿ ನಾಯ್ಕ, ತದಡಿ ಅಶ್ವತ್ಥ ಗಣಪತಿ ಮಂದಿರ ಅಧ್ಯಕ್ಷ ಅರುಣಕುಮಾರ ನಾಯ್ಕ, ತದಡಿ ಮೀನುಗಾರ ವ್ಯಾಪಾರಸ್ಥರ ಅಧ್ಯಕ್ಷ ಚಂದ್ರಶೇಖರ ಟಿ. ನಾಯ್ಕ, ನಾರಾಯಣ ನಾಯ್ಕ ಹನೇಹಳ್ಳಿ, ಇತರರಿದ್ದರು.