

ಸಿದ್ದಾಪುರ: ತಾಲೂಕಿನ ಶ್ರೀ ಮನ್ನೆಲೆಮಾವಿನಮಠದ ಪೀಠಾಧಿಪತಿಗಳಾದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿಗಳು ನಾಲ್ಕನೇ ಚಾತುರ್ಮಾಸ್ಯ ವ್ರತವನ್ನು ಗುರುಪೂರ್ಣಿಮೆ ದಿನವಾದ ಗುರುವಾರ ವ್ಯಾಸ ಪೂಜೆಯೊಂದಿಗೆ ಶ್ರೀಮನ್ನೆಲೆಮಾವಿನಮಠದಲ್ಲಿ ಸಂಕಲ್ಪ ಮಾಡಿದರು.
ಮಠದ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಮುರಾರ್ಜಿ ಹೊಸಮನೆ ದಂಪತಿ , ಪುರೋಹಿತರಾದ ವಿ.ವಿನಾಯಕ ಭಟ್ಟ ವಾಟೆಕೊಪ್ಪ ಹಾಗೂ ಆಗಮಿಸಿದ ವೈದಿಕರ ಸಹಕಾರದೊಂದಿಗೆ ಸೀಮೆಯ ಸಮಸ್ತ ಭಕ್ತರ ಪರವಾಗಿ ಗುರು ಪಾದುಕಾ ಪೂಜೆ, ಭೀಕ್ಷಾ ವಂದನೆ ಮತ್ತು ವಸ್ತ್ರ ಸಮರ್ಪಣೆ ನಡೆಸಿದರು.
ಸೀಮೆಯ ಅನೇಕ ಭಜನಾ ಮಂಡಳಿಗಳ ಮಾತೆಯರು ಮತ್ತು ಭಕ್ತಾದಿಗಳು ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಿಸಿದರು. ನಂತರ ಶ್ರೀಗಳು ಎಲ್ಲ ಭಕ್ತರಿಗೆ ತೀರ್ಥ ಮತ್ತು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಹಾಗೂ ಆಡಳಿತ ಮಂಡಳಿ ಸದಸ್ಯರು, ಶಿಷ್ಯವೃಂದವರಿದ್ದರು. ನಿತ್ಯ ಮಠದ ಶಿಷ್ಯ ಹಾಗೂ ಭಕ್ತವೃಂದದವರಿಂದ ಗುರು ಪಾದುಕಾ ಪೂಜೆ , ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.