

ಕುಮಟಾ: ಚಾತುರ್ಮಾಸ್ಯದ ಮೂಲಕ ಧರ್ಮದಲ್ಲಿ ವಿಜೃಂಭಿಸುವ ಹಾಗೂ ಧರ್ಮ ಜಾಗೃತಿಯನ್ನು ಎಲ್ಲರ ಹೃದಯದಲ್ಲಿ ತುಂಬಿಸುವ ಕೆಲಸವಾಗಿದೆ. ಕೋನಳ್ಳಿಯ ಚಾತುರ್ಮಾಸ್ಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದಾಗಿದೆ ಎಂದು ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಕೋನಳ್ಳಿ ವನದುರ್ಗಾ ಮಂದಿರದ ಪರಿಸರದಲ್ಲಿ ಕಳೆದ 42 ದಿನಗಳಿಂದ ಚಾತುರ್ವಸ್ಯ ನಿರತರಾಗಿ ಬುಧವಾರ ಸೀಮೋಲ್ಲಂಘನದೊಂದಿಗೆ ವ್ರತಾಚರಣೆಯನ್ನು ಪರಿಸಮಾಪ್ತಿಗೊಳಿಸಿದ ಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ಅಸ್ತಿತ್ವವನ್ನೇ ಪೂರ್ಣ ಪ್ರಮಾಣದಲ್ಲಿ ಭಕ್ತಿಯಾಗಿ ಸಮರ್ಪಿಸಬೇಕು. ಶಿಷ್ಯನ ಬೇಡಿಕೆಗಳು ಗುರುವಿನ ಮನಸಿನ ಅಂತರಾಳಕ್ಕೆ ಮುಟ್ಟಿಸಬೇಕು. ಶ್ರದ್ಧೆಯನ್ನು ತೊಡಗಿಸಬೇಕು. ಸನಾತನ ಧರ್ಮವನ್ನು ಬೆಳೆಸುವ ನಮ್ಮ ಸಂಬಂಧಗಳು ಹಾಗೂ ಪ್ರಯತ್ನಗಳು ಪರಸ್ಪರ ಧಾರ್ವಿುಕ ಮೌಲ್ಯ, ಪ್ರೀತಿ, ವಿಶ್ವಾಸ ಬೆಳೆಸುವಂಥದ್ದಾಗಿದೆ ಎಂದರು.
ಚಾತುರ್ವಸ್ಯದ ಮೂಲಕ ಸಮಾಜದ ಪರಿವರ್ತನೆ ಮಾಡುವಲ್ಲಿ ನಿರಂತರ ಪ್ರಯತ್ನ ಮಾಡಿದ್ದೇನೆ. ತಾಯಿ ಜಾಗದಲ್ಲಿ ನಿಂತು ಎಲ್ಲರನ್ನೂ ನೋಡಿದ್ದೇನೆ. ಅಯೋಧ್ಯೆಯಲ್ಲಿ ಮಠ ನಿರ್ವಣಕ್ಕೆ ಮುಂದಾಗಿದ್ದೇವೆ. ಮಠ ನಿಮ್ಮದು, ಭಗವಂತನ ಸಂದೇಶ ತರುವುದಷ್ಟೇ ನಮ್ಮ ಕರ್ತವ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಮನಸು ಮಾಗಿಸಿಕೊಳ್ಳಬೇಕು. ಎಲ್ಲಿಯೂ ತಪ್ಪು ಹುಡುಕುಬಾರದು. ಚಾತುರ್ವಸ್ಯದ ನೆಪದಲ್ಲಿ ನಾಮಧಾರಿ ಸಮಾಜ ಆರೋಗ್ಯಯುತವಾದ ಸಂಘಟನೆ ಬೆಳೆಸಿ ಇತರ ಸಮಾಜಗಳಿಗೆ ಮಾದರಿಯಾಗಿ ಸಹೋದರತೆಯಿಂದ ಬೆಳೆದಿದ್ದು ಇತಿಹಾಸ. ಚಾತುರ್ವಸ್ಯದ ಅಮೃತಫಲವನ್ನು ಎಲ್ಲರೂ ಉಂಡಿದ್ದೀರಿ. ಆಧ್ಯಾತ್ಮಿಕ ಸಾಮಾಜಿಕ ಮೌಲ್ಯಗಳು ಎತ್ತರಕ್ಕೇರಬೇಕು. ಸನಾತನ ಸಾಮ್ರಾಜ್ಯ ಇಲ್ಲಿಂದ ಬೆಳಗಬೇಕು ಎಂದರು.
ಜುನಾ ಅಖಾಡದ ದೇವಾನಂದ ಸರಸ್ವತೀ ಮಹಾರಾಜ ಮಾತನಾಡಿ, ಜನ್ಮಾಂತರದಿಂದ ಸನಾತನ ಧರ್ಮ ಹಾಗೂ ಜಗತ್ ಕಲ್ಯಾಣಕ್ಕಾಗಿ ಸೇವಾ ನಿಷ್ಠರಾಗಿರುವ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ವಸ್ಯ ಪೂರ್ಣತೆ ಈ ಪಾವನ ಕ್ಷೇತ್ರದ ಮೆರುಗು ಹೆಚ್ಚಿಸಿದೆ ಎಂದರು.
ಸಚಿವ ಮಂಕಾಳು ವೈದ್ಯ, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ, ಮುರಳೀಧರ ಪ್ರಭು ಮಾತನಾಡಿದರು. ಸೂರಜ ನಾಯ್ಕ, ರತ್ನಾಕರ ನಾಯ್ಕ, ಮಂಜುನಾಥ ಎಲ್. ನಾಯ್ಕ, ಟಿ.ಟಿ.ನಾಯ್ಕ, ವಾಮನ ನಾಯ್ಕ ಇತರರು ಇದ್ದರು. ಗೋವಿಂದ ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ನಾಮಧಾರಿ ಸಂಘಟನೆಯ ಅಧ್ಯಕ್ಷ ಮಂಜುನಾಥ ಆರ್. ನಾಯ್ಕ ವಂದಿಸಿದರು.
ಸೀಮೋಲ್ಲಂಘನ ಪ್ರಯುಕ್ತ ಬುಧವಾರ ಬೆಳಗ್ಗೆ ಗಂಟೆಗೆ ಬೈಕ್ ರ‍್ಯಾಲಿ ಮತ್ತು ಮೆರವಣಿಗೆಯಲ್ಲಿ ಶ್ರೀಗಳು ಕೋನಳ್ಳಿಯಿಂದ ದೀವಗಿ ಗ್ರಾಮಕ್ಕೆ ತೆರಳಿ ಅಲ್ಲಿನ ಅಘನಾಶಿನಿ ನದಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸ್ಥಳೀಯ ಶ್ರೀ ರಮಾನಂದ ಸ್ವಾಮಿಗಳ ಮಠದಲ್ಲಿ ಶ್ರೀಹನುಮಂತನಿಗೆ ಪೂಜೆ ಸಲ್ಲಿಸಿ, ಮರಳಿ ಕೋನಳ್ಳಿಗೆ ಆಗಮಿಸಿ, ಧರ್ಮ ಸಭೆ ನಡೆಸಿದರು.