

ಬೀರೂರು: ಅಮೃತ್‌ಮಹಲ್ ಕಾವಲ್ ಹೋರಿ ಕರುಗಳ ಬಹಿರಂಗ ಹರಾಜಿನಲ್ಲಿ ಅಜ್ಜಂಪುರ ರಾಸುಗಳಾದ ಗಾಳಿಕೆರೆ ಮತ್ತು ನಾರಾಯಣಿ ರಾಸುಗಳು 2.12 ಲಕ್ಷ ರೂ.ಗೆ ಹರಾಜಾಗಿವೆ.
ಬೀರೂರು ಹೊರ ವಲಯದಲ್ಲಿರುವ ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರದಲ್ಲಿ ಬುಧವಾರ ನಡೆದ ಹೋರಿ ಕರುಗಳ ಹರಾಜು ಪ್ರಕ್ರಿಯೆಯಲ್ಲಿ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರಗಳಾದ ಅಜ್ಜಂಪುರ, ಬಾಸೂರು, ಹಬ್ಬನಘಟ್ಟ, ಲಿಂಗದಹಳ್ಳಿ, ರಾಯಸಂದ್ರ, ಚಿಕ್ಕೆಮ್ಮೆಗನೂರು, ಬಿದರೆ, ರಾಮಗಿರಿ, ಬಿಳುವಾಲ ಮತ್ತು ಕೈನೋಡು ಕೇಂದ್ರಗಳ 196 ಹೋರಿ ಕರುಗಳು, 16 ಬೀಜದ ಹೋರಿಗಳು ಮತ್ತು 4 ಎತ್ತುಗಳ ಹರಾಜು ನಡೆಯಿತು.
ಕೊಟ್ಟಿಗೆಯಿಂದ ಒಂದಾದ ಮೇಲೆ ಒಂದರಂತೆ ತಳಿ ಹೆಸರು ನೀಡಿ ಗುರುತಿಸಿದ ಕರುಗಳು ಬಂದ ಕೂಡಲೇ ಸುತ್ತಲೂ ನೆರದಿದ್ದ ಸಾವಿರಾರು ರೈತರೂ ಕೇಕೆ ಹಾಕುತ್ತಾ ಸರ್ಕಾರಿ ಸವಾಲಿನ ಮೇಲೆ ಹಣದ ಏರಿಕೆ ಮಾಡುತ್ತಿದ್ದರು. ಈ ಪೈಕಿ ಅಜ್ಜಂಪುರ ತಳಿಗಳನ್ನು ಸೊರಬ ತಾಲೂಕಿನ ರಾಮಚಂದ್ರಪ್ಪ 2.12 ಲಕ್ಷ ರೂ.ಗೆ ಬಿಡ್ ಮಾಡಿದರೆ, ಆಯನೂರಿನ ಪ್ರವೀಣ್ ಓಬಳಾದೇವಿ, ಗೌರಿ ತಳಿಗಳ ರಾಸುಗಳನ್ನು 1.70 ಲಕ್ಷ ರೂ.ಗೆ ಪಡೆದುಕೊಂಡರು. ಬಿಳುವಾಲದ ಓಬಳಾದೇವಿ, ಪೂಜೆ ತಳಿಗಳನ್ನು ಚಿತ್ರದುರ್ಗದ ಪ್ರಸನ್ನಕುಮಾರ್ 1.47 ಲಕ್ಷ ರೂ.ಗೆ ತಮ್ಮದಾಗಿಸಿಕೊಂಡರು. 1ಪಾತ್ರೆ, 2 ಮದಕೆರೆ ತಳಿಗಳು 1.47 ಲಕ್ಷ ರೂ.ಗೆ ಶಿಕಾರಿಪುರದ ಗಂಗಾಧರಪ್ಪರವರಿಗೆ ಹರಾಜು ಮಾಡಲಾಯಿತು.