

ಕಡಬ: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನ.2ರಂದು ನೂರು ವರ್ಷ ಪೂರೈಸಲಿದ್ದು, ಶತಮಾನೋತ್ಸವ ಸಮಾಲೋಚನಾ ಸಭೆ ಕಾಣಿಯೂರು ಸಂಘದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ಸಂಘದ ವತಿಯಿಂದ ಹತ್ತು ಕಾರ್ಯಕ್ರಮ ಆಯೋಜಿಸುವ ಬಗ್ಗೆ ಈ ಹಿಂದೆಯೇ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ನಾಲ್ಕು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. 3ರಂದು ಆರೋಗ್ಯ ಉಚಿತ ಶಿಬಿರ ನಡೆಯಲಿದ್ದು, ಉಳಿದಂತೆ ಸರ್ಕಾರಗಳ ಯೋಜನೆಗಳ ಮಾಹಿತಿ ಕಾರ್ಯಕ್ರಮ, ಕ್ರೀಡಾಕೂಟ, ಕೃಷಿಮೇಳ, ಸ್ಮರಣ ಸಂಚಿಕೆ ಹಾಗೂ ಉದ್ಘಾಟನಾ ಸಮಾರಂಭ ನಡೆಸಲಾಗುವುದು ಎಂದರು.
ಸಂಘದ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಸೊರಕೆ ಮಾತನಾಡಿ, ಸಂಘದ ಆಡಳಿತ ಮಂಡಳಿ ಉತ್ತಮ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಸುಂದರ ದೇವಸ್ಯ, ಪರಮೇಶ್ವರ ಗೌಡ ಅನಿಲ, ದಿವಾಕರ ಮರಕ್ಕಡ, ಶೀಲಾವತಿ ಮುಗರಂಜ, ವೀಣಾ ಅಂಬುಲ, ರಮೇಶ್ ಉಪ್ಪಡ್ಕ, ರತ್ನಾವತಿ ಮುದುವ, ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಸಹಕರಿಸಿದರು.