ನಳನಳಿಸುತ್ತಿದೆ ನಲುಗಿದ ಚಾರ್ಮಾಡಿ

charmady new
Published on

ಶ್ರವಣ್‌ಕುಮಾರ್ ನಾಳ, ಪುತ್ತೂರು

ಕಳೆದ ಆಗಸ್ಟ್ 9ರಂದು ಪಶ್ಚಿಮಘಟ್ಟದಲ್ಲಿ ಸಂಭವಿಸಿದ ಜಲಸ್ಫೋಟ, ಗುಡ್ಡಕುಸಿತ ಸಹಿತ ಪ್ರಾಕೃತಿಕ ವಿಕೋಪ ಪರಿಣಾಮ ಚಾರ್ಮಾಡಿ ಘಾಟ್‌ನ ಕೆಳಭಾಗದ ಕೊಳಂಬೆ, ಅಂತರ ಪ್ರದೇಶಗಳು ಸಂಪೂರ್ಣ ಮರಳು, ಹೂಳು ತುಂಬಿ 70-80 ಎಕರೆ ಕೃಷಿ ಭೂಮಿ ನಾಶವಾಗಿತ್ತು. ಆದರೆ ‘ಬದುಕು ಕಟ್ಟೋಣ ಬನ್ನಿ’ ಎಂಬ ಯೋಜನೆಯಿಂದಾಗಿ ಈಗ ಕೊಳಂಬೆ, ಅಂತರ ಪ್ರದೇಶ ಕೃಷಿಯಿಂದ ನಳನಳಿಸುತ್ತಿದೆ, ಹಸಿರಾಗಿ ಕಂಗೊಳಿಸುತ್ತಿದೆ.

ಬೃಹತ್ ಮರಗಳು, ಕಲ್ಲು, ಮಣ್ಣು, ಮರಳು ಪ್ರವಾಹದ ನೀರಿನೊಂದಿಗೆ ಹರಿದು ಕೊಳಂಬೆ- ಅಂತರ ಪ್ರದೇಶದ ಗದ್ದೆ, ಕೃಷಿತೋಟ ಸಂಪೂರ್ಣ ನಾಶವಾಗಿ 3-4 ಅಡಿ ಎತ್ತರದಲ್ಲಿ ಮರಳು ರಾಶಿ ಬಿದ್ದಿತ್ತು. ಸ್ಥಳೀಯ ಆಡಳಿತದಿಂದ ಮಾಹಿತಿ ಪಡೆದ ಸರ್ಕಾರವು ಕೊಳಂಬೆ- ಅಂತರ ಪ್ರದೇಶವನ್ನು ಸುಸ್ಥಿತಿಗೆ ತರಲು 8-10 ತಿಂಗಳು ಅಗತ್ಯ ಎಂಬುದಾಗಿ ತಿಳಿಸಿತ್ತು.

ನಂತರ ಉಜಿರೆಯ ಸಂಧ್ಯಾ ಟ್ರೇಡರ್ಸ್‌ನ ರಾಜೇಶ್ ಪೈ, ಲಕ್ಷ್ಮೀ ಗ್ರೂಪ್‌ನ ಮೋಹನ್ ಕುಮಾರ್ ಎಂಬಿಬ್ಬರು ಉದ್ಯಮಿಗಳ ನೇತೃತ್ವದಲ್ಲಿ ‘ಬದುಕು ಕಟ್ಟೋಣ ಬನ್ನಿ’ ಎಂಬ ಯೋಜನೆಗೆ ರೂಪುರೇಷೆ ನೀಡಿ, ಸ್ಥಳೀಯರು, ಸಾರ್ವಜನಿಕರು ಹಾಗೂ ಇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕೊಳಂಬೆ- ಅಂತರ ಪ್ರದೇಶವನ್ನು ಸ್ವಸ್ಥಿತಿಗೆ ತರುವ ಕೆಲಸಕ್ಕೆ ಚಾಲನೆ ನೀಡಲಾಯಿತು. ಜನರ ಸಹಭಾಗಿತ್ವದೊಂದಿಗೆ ಕೇವಲ ಎರಡೇ ತಿಂಗಳಲ್ಲಿ ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ.

ಹೇಗೆ ನಡೆಯಿತು ಕೆಲಸ?: ದುರಂತದ ಬಳಿಕ ಪ್ರವಾಹ ಪೀಡಿತ ಪ್ರದೇಶ ಪ್ರವಾಸಿ ತಾಣವಾಗಿ ಬದಲಾಗಿತ್ತು. ಜನ ಅಚ್ಚರಿಯಿಂದ ನೋಡಿ ಹೋಗುತ್ತಿದ್ದರು. ಇದೇ ಹೊತ್ತಿಗೆ ತಾಲೂಕಿನ ಹಲವು ಸಂಘಟನೆಗಳು, ಸಾರ್ವಜನಿಕರು ಸ್ಥಳೀಯರಿಗೆ ನೆರವು ನೀಡಲು ಮುಂದಾದರು. ಇದಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು ಬದುಕು ಕಟ್ಟೋಣ ಬನ್ನಿ ಯೋಜನೆ ಮೂಲಕ.

ಇದರಂತೆ ಪ್ರತಿ ಭಾನುವಾರ 500 ಸ್ವಯಂಸೇವಕರು ಹಾಗೂ ಇತರೆ ದಿನ 20ಕ್ಕೂ ಅಧಿಕ ಮಂದಿ ಮೂರ್ನಾಲ್ಕು ಅಡಿ ಎತ್ತರದಲ್ಲಿ ಹರಡಿದ್ದ ಮರಳನ್ನು ತೆರವುಗೊಳಿಸಿದ್ದಾರೆ. ಜತೆಗೆ ಗದ್ದೆಗಳ ಮರಳು, ಹೂಳು ತೆಗೆದು ಉಳುಮೆ ಮಾಡಿ ಕೃಷಿಯೋಗ್ಯ ಜಮೀನಾಗಿ ಪರಿವರ್ತಿಸಿದ್ದಾರೆ. ನದಿ ಸಮೀಪ ಬಿದ್ದಿದ್ದ ಬೃಹತ್ ಮರಗಳನ್ನು ತೆರವುಗೊಳಿಸಿ ಮತ್ತೆ ನದಿ ನೀರು ಕೃಷಿ ಭೂಮಿಗೆ ನುಗ್ಗದಂತೆ ತಡೆಯುವ ಕೆಲಸವನ್ನೂ ಮಾಡಿದ್ದಾರೆ.

ಈಗ ಹೇಗಿದೆ ಗೊತ್ತೇ?:

‘ಬದುಕು ಕಟ್ಟೋಣ ಬನ್ನಿ’ ಯೋಜನೆಯಂತೆ 21 ಗದ್ದೆಗಳಲ್ಲಿದ್ದ 3-4 ಅಡಿ ಮರಳು ತೆಗೆದು ಉಳುಮೆ ಮಾಡಲಾಗಿದ್ದು, 16 ಗದ್ದೆಗಳಲ್ಲಿ ಬಿತ್ತನೆ ಮಾಡಲಾಗಿದೆ. 1 ಎಕರೆ ಪ್ರದೇಶದಲ್ಲಿ ತರಕಾರಿ ಕೃಷಿ, 350ಕ್ಕೂ ಅಧಿಕ ತೆಂಗಿನ ಸಸಿ ನಾಟಿ, 1 ಸಾವಿರ ಅಡಕೆ ನಾಟಿ ಮಾಡಲಾಗಿದೆ. ಪ್ರವಾಹದ ವೇಳೆ ನೀರಾವರಿ ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿದ್ದು, ಗದ್ದೆ, ಕೃಷಿತೋಟಗಳಿಗೆ ನೈಸರ್ಗಿಕವಾಗಿ ನೀರು ಹರಿಯುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕಟಾವು ಹಂತಕ್ಕೆ ತಲುಪಿದ ಕೃಷಿ 16 ಗದ್ದೆಗಳಲ್ಲಿ ಭತ್ತ ಬಿತ್ತನೆ ಮಾಡಲಾಗಿದ್ದು, ಪೈರುಗಳು ಕಟಾವು ಹಂತಕ್ಕೆ ತಲುಪಿವೆ. ಗೋವುಗಳಿಗೆ ಬೇಕಾದ ಹುಲ್ಲು ಕೂಡ ಬೆಳೆದಿದೆ. ಜತೆಗೆ ಬಸಳೆ, ಹರಿವೆ ಸೊಪ್ಪು, ತೊಂಡೆಕಾಯಿ, ಬದನೆ ಉತ್ತಮ ಇಳುವರಿ ನೀಡುತ್ತಿದೆ. ಜತೆಗೆ ಖಾಲಿ ಉಳಿದಿರುವ ಪ್ರದೇಶಗಳಲ್ಲಿ 150ಕ್ಕೂ ಅಧಿಕ ವಿವಿಧ ಜಾತಿಯ ಹಣ್ಣುಗಳ ಗಿಡ, 300 ಬಾಳೆ, 80 ಪಪ್ಪಾಯಿ ಗಿಡಗಳನ್ನು ನೆಡಲಾಗಿದೆ.

ಜಿಲ್ಲೆಯ ವಿವಿಧ ಪ್ರದೇಶಗಳ 500ಕ್ಕೂ ಅಧಿಕ ಸ್ವಯಂಸೇವಕರ ಶ್ರಮದಿಂದ ಪ್ರವಾಹ ಪೀಡಿತ ಕೊಳಂಬೆ- ಅಂತರ ಪ್ರದೇಶದಲ್ಲಿ ಸಂಪೂರ್ಣ ಹೂಳು ತೆಗೆದು ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಲಾಗಿದೆ. ಕೃಷಿ ಇಲ್ಲಿನ ಜನರ ಪ್ರಮುಖ ಆದಾಯದ ಮೂಲ. ಅದಕ್ಕಾಗಿ ನಾವು ಮಾಡಿದ ಸಣ್ಣ ಪ್ರಯತ್ನವಿದು. - ಮೋಹನ್ ಕುಮಾರ್, ಉದ್ಯಮಿ ಬದುಕು ಕಟ್ಟೋಣ ಬನ್ನಿ ಎಂಬ ಯೋಜನೆಯಂತೆ ಕೊಳಂಬೆ- ಅಂತರದ ಪ್ರವಾಹ ಪೀಡಿತ 70 ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಯಶಸ್ವಿಯಾಗಿದೆ. ನಮ್ಮ ಕಾರ್ಯ ಇಲ್ಲಿಗೆ ಮುಗಿದಿಲ್ಲ. ಈ ಭಾಗದ ಜನರನ್ನು ಕೃಷಿ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಗುರಿ. - ರಾಜೇಶ್ ಪೈ, ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net