ಜಲಜೀವನ್ ಕಾಮಗಾರಿ ಅಪೂರ್ಣ : ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರ ಆಕ್ರೋಶ

05
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಳೆದ ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ನೀರಿನ ಯೋಜನೆಯ ಕಾಮಗಾರಿ ಅಪೂರ್ಣವಾಗಿದ್ದು, ಇದರಿಂದ ಹಲವಾರು ಸಮಸ್ಯೆಗಳು ಉಂಟಾಗಿರುವ ಬಗ್ಗೆ ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಚಾರ್ಮಾಡಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಹರಿಹಾಯ್ದಿದ್ದಾರೆ.

ಚಾರ್ಮಾಡಿ ಗ್ರಾಪಂ ಗ್ರಾಮಸಭೆ ಅಧ್ಯಕ್ಷೆ ಶಾರದಾ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಭವನದಲ್ಲಿ ಸೋಮವಾರ ನಡೆಯಿತು.

ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದಂತೆ ಗ್ರಾಮಸ್ಥರು ಜೆಜೆಎಂ ಕಾಮಗಾರಿ ಕುರಿತು ಪ್ರಸ್ತಾಪಿಸಿದರು. ಈ ಸಮಯ ಸಭೆಯಲ್ಲಿದ್ದ ಗುತ್ತಿಗೆದಾರರನ್ನು ಮಾಹಿತಿ ನೀಡುವಂತೆ ಅಧಿಕಾರಿ ಕೇಳಿಕೊಂಡರು. ಗುತ್ತಿಗೆದಾರರಿಗೆ ಸಮಜಾಯಿಷಿ ನೀಡಲು ಬಿಡದ ಗ್ರಾಮಸ್ಥರು ಅಪೂರ್ಣ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ತಿಳಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗುತ್ತಿಗೆದಾರರು ಮುಂದಿನ ಫೆಬ್ರವರಿ 26ರೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಜೆಜೆಎಂ ವಿಚಾರ ಒಂದು ಹಂತದಲ್ಲಿ ಪ್ರಕೋಪಕ್ಕೆ ತಿರುಗುತ್ತಿದ್ದಂತೆ ಮಾರ್ಗದರ್ಶಿ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಪಿ.ಎಸ್. ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳ್ಳಲು ಯತ್ನಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಹೆದ್ದಾರಿ ಮತ್ತು ಗ್ರಾಮೀಣ ರಸ್ತೆ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ತಾಪಂ ಮಾಜಿ ಸದಸ್ಯ ಕೊರಗಪ್ಪ ಗೌಡ ಆಗ್ರಹಿಸಿದರು.

ಉಪಾಧ್ಯಕ್ಷೆ ನೀಲು ಹಾಗು ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪುರುಷೋತ್ತಮ ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕುಂಞ ವರದಿ ವಾಚಿಸಿದರು.

ಅವೈಜ್ಞಾನಿಕ ವ್ಯವಸ್ಥೆಯಿಂದ ಸಮಸ್ಯೆ

ಗ್ರಾಮದಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ಪರಿವರ್ತಕ, ಲೈನ್‌ಗಳನ್ನು ಅಳವಡಿಸಲಾಗಿದೆ. ಲೋವೋಲ್ಟೇಜ್, ಹೈವೋಲ್ಟೇಜ್ ಸಮಸ್ಯೆಯಿಂದ ವಿದ್ಯುತ್ ಉಪಕರಣಗಳು ಸುಟ್ಟು ಹೋಗುತ್ತಿವೆ. ಈ ವಿಚಾರವನ್ನು ಮೆಸ್ಕಾಂ ಗಮನಕ್ಕೆ ತಂದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥ ಕೃಷ್ಣ ಭಟ್ ಪ್ರಸ್ತಾಪಿಸಿದರು. ಚಿಬಿದ್ರೆಗೆ ಪ್ರತ್ಯೇಕ ಫೀಡರ್‌ಬೇಕು, ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು. ಬೀಟಿಗೆ ಪ್ರದೇಶಕ್ಕೆ ಪ್ರತ್ಯೇಕ ಪರಿವರ್ತಕದ ಅಗತ್ಯವಿದೆ ಎಂದು ಗ್ರಾಮಸ್ಥರಾದ ಸಿದ್ದೀಕ್ ಮತ್ತು ಲತೀಫ್ ಹೇಳಿದರು. ಇಲಾಖೆಯಿಂದ ಅಗತ್ಯ ಪರಿಕರಗಳು ಸರಬರಾಜಾದ ತಕ್ಷಣ ತಂತಿ ಬದಲಾಯಿಸುವ ಕಾಮಗಾರಿ ಕೈಗೊಳ್ಳುವುದಾಗಿ ಸೋಮಂತಡ್ಕ ಮೆಸ್ಕಾಂ ಜೆಇ ಸುಭಾಷ್ ತಿಳಿಸಿದರು.

ಆನೆ ಹಾವಳಿ ವಿಪರೀತ

ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ, ಚಿಬಿದ್ರೆ ಹಾಗೂ ಚಾರ್ಮಾಡಿ ಗ್ರಾಮಗಳಲ್ಲಿ ಆನೆ ಹಾವಳಿ ವಿಪರೀತವಾಗಿದ್ದು, ಪಟಾಕಿಗೂ ಆನೆಗಳು ಜಗ್ಗುತ್ತಿಲ್ಲ, ಆನೆ ಕಂದಕಗಳು ನಿಷ್ಕ್ರೀಯ ಯೋಜಕವಾಗಿವೆ. ಆನೆ ಹಾವಳಿ ನಿಯಂತ್ರಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಣ್ಣ ಭಂಡಾರಿ ಪ್ರಶ್ನಿಸಿದರು. ಚಾರ್ಮಾಡಿ - ಕನಪಾಡಿ ಮೀಸಲು ಅರಣ್ಯ ಪ್ರದೇಶದ 30 ಕಿ.ಮೀ. ವ್ಯಾಪ್ತಿಗೆ ನೇತಾಡುವ ಸೋಲಾರ್ ಬೇಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯ ಇಲಾಖೆ ಡಿಆರ್‌ಎಫ್ ಒಗಳಾದ ರಂಜಿತ್ ಹಾಗು ನಾಗೇಶ್ ಗೌಡ ತಿಳಿಸಿದರು. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಪ್ರವಾಸಿಗರು ಆಹಾರವನ್ನು ಹಾಕುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net