

ಹರೀಶ್ ಮೋಟುಕಾನ ಮಂಗಳೂರು
ಕರೊನಾ ಲಾಕ್‌ಡೌನ್‌ನಿಂದ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳೂ ಸ್ತಬ್ಧವಾಗಿವೆ. ಪಶ್ಚಿಮ ಘಟ್ಟ ಹಾಗೂ ಇತರ ಕಡೆ ಚಾರಣ, ಬೇಟೆ ಮೊದಲಾದವುಗಳಿಗೆ ಬ್ರೇಕ್ ಬಿದ್ದಿರುವುದರಿಂದ ಕಾಡ್ಗಿಚ್ಚು ಕೂಡ ಕಡಿಮೆಯಾಗಿದ್ದು, ವನ್ಯಜೀವಿಗಳು ಸುರಕ್ಷಿತವಾಗಿ ನಿರ್ಭಯದಿಂದ ಬದುಕುವಂತಾಗಿದೆ.
ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಘಟ್ಟಗಳಿಗೆ ಚಾರಣ ಹೋಗುವವರ ಸಂಖ್ಯೆ ಹೆಚ್ಚು. ಅದೇ ಸಂದರ್ಭ ಬೇಟೆಗಾರರು ಕೂಡ ಹೊರಡುತ್ತಾರೆ. ಒಣಗಿ ನಿಂತಿರುವ ಹುಲ್ಲು, ತರಗೆಲೆಗಳಿಗೆ ಬೆಂಕಿ ಬೀಳುವುದು ಕೂಡಾ ಇದೇ ಅವಧಿಯಲ್ಲಿ. ಲಾಕ್‌ಡೌನ್‌ನಿಂದ ಸದ್ಯ ಪ್ರಕೃತಿಯೂ ನಿಟ್ಟುಸಿರು ಬಿಡುವಂತಾಗಿದೆ.
ಹಾಡಹಗಲೇ ನಾಡಿಗಿಳಿದ ವನ್ಯಜೀವಿಗಳು: ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿರುವುದರಿಂದ ಕಾಡಾನೆ, ಕಾಡೆಮ್ಮೆ ಮೊದಲಾದ ವನ್ಯಜೀವಿಗಳು ಹಗಲು ವೇಳೆಯಲ್ಲೇ ನಾಡಿಗೆ ಬರಲಾರಂಭಿಸಿವೆ. ಸುಳ್ಯದಿಂದ ಮಂಡೆಕೋಲು, ಅಡೂರು ಮೂಲಕ ಕೇರಳದ ಬಂದಡ್ಕ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಚ್ಚಲಾಗಿದೆ. 15 ದಿನಗಳಿಂದ ಈ ರಸ್ತೆ ಜನ, ವಾಹನ ಸಂಚಾರವಿಲ್ಲದೆ ನಿಶ್ಯಬ್ಧವಾಗಿದೆ. ಒಂದು ವಾರದಿಂದ ಈ ರಸ್ತೆಯಲ್ಲಿ ಕಾಡಾನೆ ಹಿಂಡು ಸವಾರಿ ಮಾಡುತ್ತಿವೆ. ಕಾಡಿನಿಂದ ಇಳಿದು ಬರುವ ಕಾಡಾನೆಗಳು ಆಹಾರಕ್ಕಾಗಿ ಅಡಕೆ ತೋಟಗಳಿಗೆ ನುಗ್ಗುತ್ತಿವೆ. ಚಾರ್ಮಾಡಿ ಘಾಟ್‌ನಲ್ಲಿ ಮಂಗಳವಾರ ರಾತ್ರಿ ಕಾಡಾನೆ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ ಕಂಡು ಬಂದಿದೆ.
ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ ಬರುವ ರಸ್ತೆಯಲ್ಲಿ ಕಾಡಾನೆಗಳು, ಕಾಡೆಮ್ಮೆಗಳು ಕರೊನಾ ನಿಯಂತ್ರಣಕ್ಕೆ ಶ್ರಮಿಸುವ ತಂಡದವರಿಗೆ ಕಾಣಸಿಕ್ಕಿವೆ. ಮಡಪ್ಪಾಡಿ, ಕೊಲ್ಲಮೊಗರು ಪರಿಸರದಲ್ಲೂ ಕಾಡಾನೆಗಳು ನಾಡಿಗೆ ಬರುತ್ತಿವೆ. ಬಿಸಿಲಿನ ಝಳಕ್ಕೆ ನೀರು ಅರಸಿಕೊಂಡು ಹಾವುಗಳು, ಕಾಡುಹಂದಿಗಳು ಕೂಡ ಕಾಡಂಚಿನ ತೋಟಗಳಲ್ಲಿರುವ ಕೆರೆಗಳ ಬಳಿಗೆ ಬರುತ್ತಿವೆ ಎಂದು ಕೃಷಿಕರು ತಿಳಿಸಿದ್ದಾರೆ.
ಈ ಹಿಂದೆ ವನ್ಯಜೀವಿಗಳು ರಾತ್ರಿ ವೇಳೆ ನಾಡಿಗೆ ಬಂದು ತೋಟಕ್ಕೆ ನುಗ್ಗುತ್ತಿದ್ದವು. ಕರೊನಾ ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲೇ ಇರುವುದರಿಂದ ಪರಿಸರ ನಿಶ್ಯಬ್ಧವಾಗಿದೆ. ಸೊಪ್ಪು, ಸೌದೆ ತರಲು ಹಾಗೂ ಕಾಡುತ್ಪತ್ತಿ ಅರಸುತ್ತ ಕಾಡಿಗೆ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಾಗಿ ವನ್ಯಜೀವಿಗಳು ನಿರ್ಭಯವಾಗಿ ನಾಡಿಗೆ ಬರುತ್ತಿವೆ. ಪ್ರಕೃತಿಯನ್ನು ಆಪೋಶನಗೈದ ಮಾನವ ಶಾಪಕ್ಕೆ ಒಳಗಾದಂತಾಗಿದೆ. ಪ್ರತಿವರ್ಷ ಒಂದಷ್ಟು ಸಮಯ ಲಾಕ್‌ಡೌನ್ ಮಾಡುವುದು ಎಲ್ಲ ರೀತಿಯ ಪರಿಸರ ಸಂರಕ್ಷಣೆಗೆ ಪೂರಕ ಎನ್ನುತ್ತಾರೆ ಪರಿಸರವಾದಿಗಳು.
ಹೆದ್ದಾರಿಗಳಲ್ಲಿ ವಾಹನ ಸಂಚಾರ ವಿರಳವಾಗಿರುವ ಕಾರಣ ಕಾಡುಪ್ರಾಣಿಗಳು ಹಗಲಿನಲ್ಲೂ ಕಂಡು ಬರುತ್ತಿವೆ. ನಿಶ್ಯಬ್ಧವಾಗಿರುವ ವಾತಾವರಣದಲ್ಲಿ ವಾಸ ಮಾಡುವುದು ಪ್ರಾಣಿಗಳಿಗೆ ಇಷ್ಟ. ಲಾಕ್‌ಡೌನ್‌ನಿಂದ ಅವುಗಳಿಗೆ ಅನುಕೂಲಕರ ವಾತಾವರಣ ಉಂಟಾಗಿದೆ. ಪರಿಸರಕ್ಕೆ ಮಾರಕವಾದ ಕಾರ್ಬನ್ ಮೊನೊಕ್ಸೈಡ್ ಇಲ್ಲದೆ ಇರುವುದರಿಂದ ರಸ್ತೆ ಬದಿ ಮರಗಳು ಚಿಗುರಿ, ಹೂ ಬಿಟ್ಟು ಕಂಗೊಳಿಸುತ್ತಿವೆ. ಎಲ್ಲಿಯೂ ದೊಡ್ಡ ಮಟ್ಟದ ಕಾಡ್ಗಿಚ್ಚು ಪ್ರಕರಣವೇ ದಾಖಲಾಗಿಲ್ಲ.
-ಪಿ.ಶ್ರೀಧರ್ (ಫೋಟೋ ಹಾಕಿ), ವಲಯ ಅರಣ್ಯಾಧಿಕಾರಿ
ಪ್ರತಿ ಬೇಸಿಗೆಯಲ್ಲಿ ಪಶ್ಚಿಮ ಘಟ್ಟ ಹಲವಾರು ಬಾರಿ ಕಾಡ್ಗಿಚ್ಚಿಗೆ ಆಹುತಿಯಾಗುತ್ತದೆ. ಆದರೆ ಈ ವರ್ಷ ಒಮ್ಮೆಯೂ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ಈ ಹಿಂದೆ ಅರಣ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ಪ್ರಕೃತಿ ಸಹಜವಾಗಿ ಬೆಂಕಿ ಬೀಳುತ್ತದೆ ಎನ್ನುತ್ತಿದ್ದರು. ಆದರೆ ಈ ವರ್ಷ ಪ್ರಕೃತಿ ಸಹಜವಲ್ಲ. ಮನುಷ್ಯರೇ ಬೆಂಕಿ ಹಾಕುತ್ತಿದ್ದರು ಎಂಬುದು ಸಾಬೀತಾಗಿದೆ. ವನ್ಯ ಜೀವಿಗಳಿಗೆ, ಪರಿಸರಕ್ಕೆ ಲಾಕ್‌ಡೌನ್‌ನಿಂದ ಒಳ್ಳೆಯದೇ ಆಗಿದೆ.
-ದಿನೇಶ್ ಹೊಳ್ಳ (ಫೋಟೋ ಹಾಕಿ), ಪರಿಸರ ಹೋರಾಟಗಾರ