

ಕುಮಟಾ: ಚಾರ್ಲ್ಸ್ ಶೋಭರಾಜ್ 17 ದೇಶಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದವನು. ಸೀರಿಯಲ್ ಕಿಲ್ಲರ್, ನಟೋರಿಯಸ್ ಕ್ರಿಮಿನಲ್ ಆತನ ಬಂಧನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ಪಾತ್ರವೂ ಇದೆ.!
ಹೌದು, ಚಾರ್ಲ್ಸ್ ಶೋಭರಾಜ್ ಕುರಿತ ಕುರಿತ ಇಂಥ ಕುತೂಹಲಕಾರಿ ವಿಚಾರಗಳನ್ನು ವಿಜಯವಾಣಿ ಅಂಕಣಕಾರ, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಬಿಚ್ಚಿಟ್ಟಿದ್ದಾರೆ. ಅವರ 84 ನೇ ಕೃತಿ `ದ ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್' ಬಿಡುಗಡೆ ಸಮಾರಂಭವು ಕುಮಟಾ ಕೊಂಕಣ ಸಭಾಭವನದಲ್ಲಿ ನಡೆಯಿತು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ ಹಾಗೂ ರಂಗಸಾರಸ್ವತ ಉತ್ತರ ಕನ್ನಡ ಇದರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಡಿ.ವಿ.ಗುರುಪ್ರಸಾದ ಮಾತನಾಡಿ, ಶೋಭರಾಜ್ ಬಂಧನವಾಗಲು ಕಾರಣ ಉತ್ತರ ಕನ್ನಡದ ನೆಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಶೋಭರಾಜ್ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು.
ಆತ ಅಪ್ರತಿಮ ಬುದ್ಧಿವಂತ, ಕಾನೂನನ್ನು ಅರಿತವನು. ಕಾರವಾರದ ಜೈಲಿನಲ್ಲಿ ಇದ್ದಾಗ ಇಡೀ ವಕೀಲರ ತಂಡ ನಡುಗುವಂತೆ ವಾದ ಮಾಡುತ್ತಿದ್ದ. ನ್ಯಾಯಾಧೀಶರು ಕೂಡ ದಂಗಾಗಿ ನೋಡುವ ಸ್ಥಿತಿ ಇತ್ತು. ಜೈಲಿನಲ್ಲಿ ಆಗುತ್ತಿದ್ದ ಸಮಸ್ಯೆಗಳ ಕುರಿತಾಗಿ ದನಿ ಎತ್ತಿದ್ದ. ಅದರಿಂದಾಗಿ ಹಿಂಡಲಗಾ ಜೈಲಿಗೆ ಆತನನ್ನು ಸ್ಥಳಾಂತರಿಸಬೇಕಾಯಿತು ಎಂದು ವಿವರಿಸಿದರು.
ಚಾರ್ಲ್ಸ್ ಶೋಭರಾಜ್ನ ಎರಡೂ ಮುಖಗಳನ್ನೂ ಈ ಪುಸ್ತಕದ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ಮಹಿಳೆಯರನ್ನು ಭೋಗಿಸುವ ಹಾಗೂ ಬದುಕಿದ್ದಾಗಲೇ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತವಾಗಿ ಆನಂದಿಸಿದ ವಿಕೃತ ವ್ಯಕ್ತಿ ಆತ. ಮನಸ್ಸಿನಲ್ಲಿ ಮನಸ್ಸಿನಲ್ಲಿ ಕೆಟ್ಟತನ ತೊಡೆಯುವಂತಾಗಬೇಕು. ಒಳ್ಳೆಯ ಮನಸ್ಸಿನವರು ನಾವಾಗಬೇಕು ಎಂದು ವಿವರಿಸಿದರು.
ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದ ಡಾ.ಗುರುಪ್ರಸಾದ್, ತಾನು ಜೀವನದಲ್ಲಿ ಬಿಎಸ್ಸಿಯಲ್ಲಿ ಮೊದಲ ವರ್ಷವನ್ನು ಒಂದು ಪ್ರಯತ್ನ ಎರಡನೇ ವರ್ಷವನ್ನು ಎರಡನೇ ಪ್ರಯತ್ನ ಹಾಗೂ ಮೂರನೇ ವರ್ಷವನ್ನು ಮೂರನೇ ಪ್ರಯತ್ನದಲ್ಲಿ ಪಾಸ್ ಮಾಡಿದವನು. ನನಗೆ ಟೈಪಿಸ್ಟ್ ಆಗಲೂ ಸಾಧ್ಯವಾಗದ ನಾಲಾಯಕ್ ಎಂದು ಮೂದಲಿಸಿದರು. ತಂದೆ ಬ್ಯಾಂಕ್ ಫಾರ್ಮ್ ತಂದು ಕೊಟ್ಟು ತುಂಬಲು ಹೇಳಿದರು. ಆದರೆ ನಾನು ಪತ್ರಕರ್ತ ಆಗಬೇಕೆಂದು ಮನಸ್ಸು ಹೊಂದಿದ್ದೆ . ಇಂಗ್ಲಿಷ್ ಎಂಎ ಪದವಿ ಪಡೆಯಲು ಏನೆಲ್ಲ ಕಷ್ಟಪಟ್ಟೆ. ಉಪನ್ಯಾಸಕರು ಬೆಳಗಿನ ವಾಕಿಂಗ್ ಗೆ ಹೋಗುವಾಗ ನಾನೂ ಅವರಲ್ಲಿ ಅಂಗಲಾಚಿ ಅವರ ಜತೆ ಹೋಗುತ್ತಿದ್ದೆ ಎಂದರು.
ಕಲಿಕೆಯ ಛಲದಿಂದಾಗಿ ನಾನು ಎಂಎಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದೆ. ಆಗ ನನ್ನ ಗೌರವ ಹೆಚ್ಚಿತು. ನಂತರ ಪತ್ರಿಕೆಯೊಂದಕ್ಕೆ 100 ರೂ. ಸಂಬಳಕ್ಕೆ ಕೆಲಸಕ್ಕೆ ಸೇರಿದೆ. ತಂದೆಯವರು ಯುಪಿಎಸ್ ಸಿ ಫಾರ್ಮ್ ತಂದು ತುಂಬಲು ಹೇಳಿದರು. ಅಂದಿನಿಂದ ನನ್ನ ಪ್ರಯತ್ನ ಸಾಗಿತು ಎನ್ನುತ್ತಾ, ತಾವು ಐಪಿಎಸ್ ಅಧಿಕಾರಿಯಾದ ಪರಿಯನ್ನು ಬಿಚ್ಚಿಟ್ಟರು.
ಕೃತಿಯನ್ನು ಲೋಕಾರ್ಪಣೆ ಮಾಡಿದ ಕಥೆಗಾರ ಮಹಾಬಲ ಮೂರ್ತಿ ಕೊಡ್ಲಕೆರೆ ಮಾತನಾಡಿ, ಮನುಷ್ಯನ ಜೀವನ ಆಕೃತಿ ಆಗಬೇಕು. ವಿಕೃತವಾಗಬಾರದು ಎಂದರು. ಮಾನವನ ಬದುಕು ಎಲ್ಲ ವಿಧದಲ್ಲಿಯೂ ವಿಕಸನಗೊಳ್ಳಬೇಕು. ಪ್ರತಿಯೊಂದು ಹಂತದಲ್ಲಿಯೂ ಒಳಿತನ್ನು ನಿರೀಕ್ಷಿಸಬೇಕು. ದಾರಿ ತಪ್ಪಿ ನಡೆಯುವುದರಿಂದ ಬದುಕು ಕರಾಳತೆಯೆಡೆಗೆ ಸಾಗುತ್ತದೆ. ಸರಿ ತಪ್ಪುಗಳನ್ನು ವಿವೇಚಿಸುವ ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಬಹಳ ಪ್ರಧಾನವಾದದ್ದು ಆ ದಿಕ್ಕಿನಲ್ಲಿ ಸದಾ ಚಿಂತನೆಗಳು ನಡೆಯಬೇಕು ಎಂದು ವಿವರಿಸಿದರು.
ಅತ್ಯಂತ ಬಲಶಾಲಿಯಾದ ಹಾಗೂ ವಿದ್ಯಾವಂತನಾದ ರಾವಣನು ಕೆಡುಕಿನ ದಾರಿಯಲ್ಲಿ ಸಾಗಿದ್ದರಿಂದ ಹತ್ತು ತಲೆಗಳನ್ನು ಹೊಂದಿದ್ದೂ ವಿಕೃತಿಯ ಹಾದಿ ಹಿಡಿದಿದ್ದನು. ಅದರಂತೆಯೇ ಅತ್ಯಂತ ಬುದ್ಧಿವಂತನಾದ ಶೋಭರಾಜ್ ಸಹ ಕೆಡುಕಿನ ದಾರಿಯಲ್ಲಿ ಸಾಗುವಲ್ಲಿ ಅವನ ಪ್ರಾರಂಭಿಕ ಜೀವನ, ಹಾಗೂ ಕುಟುಂಬವೂ ಕಾರಣ. ಪ್ರತಿಯೊಬ್ಬರ ಬದುಕಿನಲ್ಲಿಯೂ ಇಂತಹ ಕರಾಳತೆಗಳು ಇದ್ದು ಸರಿ ತಪ್ಪುಗಳನ್ನು ವಿವೇಚಿಸಿ ಮುನ್ನಡೆಯಬೇಕು ಎಂದರು.
ನಿವೃತ್ತ ಎಸ್ಪಿ ಎನ್.ಟಿ ಪ್ರಮೋದರಾವ್ ಮಾತನಾಡಿ, ವ್ಯಕ್ತಿ ಶಾಶ್ವತರಲ್ಲ ಆದರೆ ಪುಸ್ತಕಗಳು ಶಾಶ್ವತವಾಗಿ ಉಳಿಯುವಂತದ್ದು. ಪುಸ್ತಕದ ವಿಚಾರಗಳು ಬದುಕಿನಲ್ಲಿ ಕಲಿಯುವಂತಹುದು ಇರುತ್ತದೆ. ಓದು ನಿರಂತರವಾದಾಗ ಬದುಕೂ ಸುಂದರ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ, ಮುರಳೀಧರ ಪ್ರಭು ಮಾತನಾಡಿ ಡಾ. ಡಿ.ವಿ ಗುರುಪ್ರಸಾದ ಅವರ ವಾರದ ಲೇಖನಗಳನ್ನು ಓದುವುದು ನನ್ನ ಹವ್ಯಾಸ. ಇಂತಹ ಹಿರಿಯ ವ್ಯಕ್ತಿ ನಮ್ಮಲ್ಲಿಗೆ ಬರುವುದು ಸಂತಸದ ವಿಚಾರ ಎಂದು ನಾನೂ ಕಾರ್ಯಕ್ರಮಕ್ಕೆ ಒಪ್ಪಿದೆ. ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷ್ಯ ಡಾ. ಗುರುಪ್ರಸಾದ ಎಂದು ಬಣ್ಣಿಸಿದರು. ಕರ್ನಾಟಕದ ಪುಟ್ಟ ಊರಾದ ಕುಮಟಾಕ್ಕೆ ಬಂದು ಪುಸ್ತಕ ಬಿಡುಗಡೆಗೆ ಮಾಡಿದ ಅವರ ಸರಳತೆ ಮೆರೆದಿದ್ದಾರೆ ಎಂದ ಅವರು, ತಮ್ಮ ಬಾಲ್ಯದ ಸಂದರ್ಭದಲ್ಲಿ ಶೋಭರಾಜ ಅವರ ಕುರಿತಾಗಿ ಇದ್ದ ವದಂತಿಗಳು ಹಾಗೂ ಅವರ ಬಗ್ಗೆ ಜನಾಭಿಪ್ರಾಯದ ಬಗ್ಗೆ ವಿವರಿಸಿದರು.
ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಸಭೆಯಲ್ಲಿದ್ದರು. ರಂಗ ಸಾರಸ್ವತದ ಸಂಸ್ಥಾಪಕ ಕಾಗಾಲ ಚಿದಾನಂದ ಭಂಡಾರಿ ಸ್ವಾಗತಿಸಿದರು, ಪ್ರಾಂಶುಪಾಲ ಕಿರಣ ಭಟ್ಟ ವಂದಿಸಿದರು, ಗಣೇಶ ಜೋಶಿ ನಿರೂಪಿಸಿದರು. ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.