

ಸರಗೂರು: ಗಣಿತದ ಲೆಕ್ಕಾಚಾರಗಳನ್ನು ಸರಳ ಮತ್ತು ಸುಲಭ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಮಹದೇವಸ್ವಾಮಿ ಹೇಳಿದರು. ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಜಯಂತಿ ಅಂಗವಾಗಿ ಕಂಪ್ಯೂಟರ್ ಆಪರೇಟರ್‌ಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಟು ದಶಮಾಂಶಗಳಿಗೆ ಲೆಕ್ಕ ನಿರ್ವಹಿಸುವ ಸಣ್ಣ ಕ್ಯಾಲ್ಕುಲೇಟರ್ ತಯಾರಿಸಿದ್ದೇ ಕಂಪ್ಯೂಟರ್ ಆವಿಷ್ಕಾರಕ್ಕೆ ಮುನ್ನುಡಿ ಬರೆಯಿತು. 1823 ರಲ್ಲಿ ಚಾರ್ಲ್ಸ್ ಬ್ಯಾಬೇಜ್ 20 ದಶಮಾಂಶ ಸಾಮರ್ಥ್ಯದ ಡಿಫರೆನ್ಸ್ ಇಂಜಿನ್ ಎಂಬ ಯೋಜಿತ ಯಂತ್ರ ವಿನ್ಯಾಸ ಮಾಡಿದರು. ಇದನ್ನು 1830ರಲ್ಲಿ ವಿಶ್ಲೇಷಣಾತ್ಮಕ ಇಂಜಿನ್ ಆಗಿ ಅಭಿವೃದ್ಧಿಗೊಳಿಸಿದರು. ಇದೇ ಆಧುನಿಕ ಕಾಲಘಟ್ಟದ ಡಿಜಿಟಲ್ ಕಂಪ್ಯೂಟರ್ ಉಗಮಕ್ಕೆ ಮೂಲ ಎಂದು ಅವರು ವಿಜ್ಞಾನಿಯ ಸಾಧನೆ ಸ್ಮರಿಸಿದರು.
ಕಂಪ್ಯೂಟರ್ ಆಪರೇಟರ್‌ಗಳ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಮಾತನಾಡಿ, ಸಣ್ಣ ಕ್ಯಾಲ್ಕುಲೇಟರ್ ಕಂಡು ಹಿಡಿದಿದ್ದೇ ‘ಮೊದಲ ಕಂಪ್ಯೂಟರ್’ ಎಂದು ಪರಿಗಣಿಸಲಾಗಿದೆ. ಬ್ಯಾಬೇಜ್ ಅವರು 1871ರವರೆಗೂ ಬ್ಯಾಬೇಜ್ ವಿಶ್ಲೇಷಣಾತ್ಮಕ ಇಂಜಿನ್ ಮೇಲೆ ಕೆಲಸ ಮಾಡಿದರು. ಹೊಸ ಹೊಸ ಶೋಧನೆಗಳಿಗೆ ಮಾರ್ಗ ಕಲ್ಪಿಸಿಕೊಟ್ಟರು. ಇದೇ ಇಂದಿನ ಮಹತ್ವದ ವಿಕಾಸಕ್ಕೆ ಅಂದಿನ ಮೊದಲ ಹೆಜ್ಜೆಗಳನ್ನು ಮರೆಯಬಾರದು ಎಂದರು.
ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಸದಾಶಿವಯ್ಯ, ಪಿಡಿಒ ಪರಮೇಶ್ವರ ಮಾತನಾಡಿದರು. ದ್ವಿತೀಯ ದರ್ಜೆ ಸಹಾಯಕರಾದ ಎಸ್.ವಿ. ಗಜೇಂದ್ರ, ಬಿ.ಪಿ. ನಾಗರಾಜು, ಪಿಡಿಒ ನಾಗೇಂದ್ರ ಸಿಬ್ಬಂದಿ ಪ್ರೇಮಾ ಮುಳ್ಳೂರು, ಸರಸ್ವತಿ, ಅರುಣ್ ಕುಮಾರ ಭಾಗವಹಿಸಿದ್ದರು.