ಲೋಕ ಕಲ್ಯಾಣ ಸಾಹಿತ್ಯದ ಮೂಲ ಆಶಯ: ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿಕೆ

Charity Lecture Ceremony Mandya
Published on

ಮಂಡ್ಯ: ಲೋಕ ಕಲ್ಯಾಣ ಮತ್ತು ಆತ್ಮ ಕಲ್ಯಾಣ ವಚನ ಸಾಹಿತ್ಯದ ಮೂಲ ಆಶಯ ಎಂದು ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ಇಲ್ಲಿನ ನೆಹರುನಗರದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ‘ವಚನಶಿಲ್ಪ’ ಕಾದಂಬರಿ ಲೋಕಾರ್ಪಣೆ ಮತ್ತು ’ಕಾಯಕಶ್ರೀ’ ಪ್ರಶಸ್ತಿ ಪ್ರದಾನ, ವಚನ ಪಿತಾಮಹ ಫ.ಗು.ಹಳಕಟ್ಟಿ ದತ್ತಿ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಅಂತರಂಗದ ಅನುಭವದ ರಸಧಾರೆ, ಅಂತರಂಗದ ಭಾವಗೀತೆ ಎಂದರು.

ಲೋಕ ಮತ್ತು ಆತ್ಮ ಕಲ್ಯಾಣದ ಆಧಾರಿತವಾಗಿ ಅನೇಕ ಕೃತಿಗಳನ್ನು ರಚಿಸಿ ಶರಣರು ಸಾಹಿತ್ಯವನ್ನು ಹೇಗೆ ಸಮಾಜದ ಪರಿವರ್ತನೆಗೆ ಬಳಸಿಕೊಂಡರು ಎಂಬುದನ್ನು ನಾವು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ಕಂಡು ಬರುತ್ತದೆ. ವಚನ ಸಾಹಿತ್ಯದ ಸೃಷ್ಟಿ ಮನರಂಜನೆಗಾಗಿ ಮಾಡಿದಲ್ಲ. ವಚನಗಳು ಇಡೀ ವಿಶ್ವಕ್ಕೆ ವಿನೂತನವಾದ ಮಾನವ ಧರ್ಮವನ್ನು ಪ್ರತಿಪಾದನೆ ಮಾಡುವಂತಹ ದೃಷ್ಟಿಯಿಂದ ರಚಿತವಾದಂತಹ ಅನುಭಾವದ ಸಾಹಿತ್ಯವಾಗಿದೆ ಎಂದರು.

ವಿಶ್ವದ ಮಹಿಳಾ ಸಾಹಿತ್ಯ ಲೋಕದಲ್ಲಿ ಅತ್ಯಂತ ಗಟ್ಟಿ ಹೆಜ್ಜೆ ಇಟ್ಟ ಅನುಭಾವಿ ಪ್ರಥಮ ವಚನಕಾರ್ತಿ ಅಕ್ಕಮಹಾದೇವಿ ಬದುಕನ್ನು ಸಾಧನೆಯನ್ನು ಅನುಭಾವ ಚಿಂತನೆಯನ್ನು ವಚನ ಶಿಲ್ಪ ಕೃತಿಯ ಮೂಲಕ ಹೆಬ್ರಿ ಅವರು ರಚಿಸಿರುವುದು ಅರ್ಥಪೂರ್ಣವಾಗಿದೆ. ಅಮೂರ್ತವಾದಂತಹ ವಚನಗಳ ಅನುಭಾವದ ಸಾಹಿತ್ಯಕ್ಕೆ ಮೂರ್ತ ರೂಪವನ್ನು ಕೊಡುವ ರೀತಿ ಅಕ್ಕಮಹಾದೇವಿಯ ವಚನ ಆಧಾರಿತ ’ವಚನ ಶಿಲ್ಪ’ ಕಾದಂಬರಿ ರಚನೆ ಮಾಡಿದ್ದಾರೆ. ಬಸವಾದಿ ಶರಣರು ತಮ್ಮ ಶರಣ ಸಾಹಿತ್ಯದ ಮೂಲಕ ಜಗತ್ತಿಗೆ ಒಂದು ಮಾನವೀಯ ಮತ್ತು ಜೀವನ ಸಂವಿಧಾನ ನೀಡಿದ್ದಾರೆ. ಶರಣ ಸಾಹಿತ್ಯವಿಲ್ಲದಿದ್ದರೆ ಕನ್ನಡ ಸಾಹಿತ್ಯ, ವಿಶ್ವ ಸಾಹಿತ್ಯ ಪರಿಪೂರ್ಣವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು

ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರ ಕಾದಂಬರಿ ’ವಚನಶಿಲ್ಪ’ ಕುರಿತು ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ.ಎನ್.ಎಸ್.ದೇವಿಕಾ ಮಾತನಾಡಿ, ವಚನ ಸಾಹಿತ್ಯ ಲೋಕದ ಅನನ್ಯ ದಾರ್ಶನಿಕ, ಮಹಿಳಾ ಚಿಂತಕಿ, ಸ್ತ್ರೀವಾದಿ ವಚನಕಾರ್ತಿ ಅಕ್ಕಮಹಾದೇವಿಯ ಕುರಿತಾದ ಚಿತ್ರಣವನ್ನು ಕೃತಿ ಒಳಗೊಂಡಿದೆ. ಅಕ್ಕಮಹಾದೇವಿ ಜೀವನ ವ್ಯಕ್ತಿತ್ವ ಸಾಧನೆಯನ್ನು ವಚನಗಳ ಮೂಲಕವೇ ಕಟ್ಟಿಕೊಟ್ಟ ಭವ್ಯ ಕೃತಿಯಾಗಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿರುವ ಕೃತಿ ಮೊದಲ ಅಧ್ಯಾಯದಲ್ಲಿ ಉಡುತಡಿಯಲ್ಲಿ ಆರಂಭವಾಗಿ ಅಂತ್ಯದಲ್ಲಿ ಕದಳಿವನದಲ್ಲಿ ಮುಕ್ತಾಯವಾಗುತ್ತದೆ. ಸಾಮಾಜಿಕ ನೆಲೆಯ ಓದಿನ ವಿಸ್ತಾರದಲ್ಲಿ ನುಡಿ ಮಾಣಿಕ್ಯದ ಹಿರಿಮೆ ಗರಿಮೆ ಆಗಿದೆ. ಹೆಬ್ರಿಯವರು ಮಾನವ ಜೀವನದ ನಾಡಿ ಮಿಡಿತವನ್ನು ಅರಿತಿರುವಂತಹವರು. ಕೃತಿ ಓದಿದ ನಂತರ ರಸಗಂಗೆಯಲ್ಲಿ ಮಿಂದೆದ್ದ ದಿವ್ಯ ಅನುಭವ ಉಂಟಾಗುತ್ತದೆ. ಅಕ್ಕ ಹೃದಯದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಾಳೆ ಎಂದು ಬಣ್ಣಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತತ್ವಪದಕಾರ ಶಂಕರ್ ಹಲ್ಲೆಗೆರೆ ಅವರಿಗೆ ಕಾಯಕಶ್ರೀ ಪ್ರಶಸ್ತಿಯನ್ನು ವಿಎಲ್‌ಎನ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ವಿ.ಸುಜಾತಾ ಕೃಷ್ಣ ಪ್ರದಾನ ಮಾಡಿದರು. ಹಲ್ಲೆಗೆರೆ ಶಂಕರ್ ಶರಣ ಸಾಹಿತ್ಯ ಪರಿಷತ್‌ಗೆ 25 ಸಾವಿರ ರೂಗಳ ದತ್ತಿ ನಿಧಿ ನೀಡಿದರು. ಕೃತಿ ಕರ್ತೃ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಶಾಲೆಯ ಮುಖ್ಯ ಶಿಕ್ಷಕಿ ನಯನಾ, ಶಿಕ್ಷಕಿ ಜಿ.ಅಶ್ವಿನಿ ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ವಚನ ಗಾಯನ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net