ನಮ್ಮ ನಿಜವಾದ ಶತ್ರು, ಮಿತ್ರ ನಾವೇ: ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ಅಭಿಮತ

Charitable Lecture Programme Mandya
Published on

ಮಂಡ್ಯ: ಏಳಿ ಎದ್ದೇಳಿ, ಗುರಿ ಗುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ಮಾತು ನಮ್ಮನ್ನು ಶರಣತ್ವದೆಡೆಗೆ ಪ್ರಚೋದಿಸುತ್ತದೆ. ನಾವು ಇತರರನ್ನು ತಿದ್ದುವ ಬದಲು ನಮ್ಮನ್ನು ನಾವು ತಿದ್ದಿಕೊಂಡು ಅರ್ಥೈಸಿಕೊಳ್ಳಬೇಕು ಎಂದು ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ಹೇಳಿದರು.

ತಾಲೂಕಿನ ಎಲೆಚಾಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಲಿಂ.ಪರಮಪೂಜ್ಯ ಕರಿಬಸವ ಸ್ವಾಮಿಗಳ ದತ್ತಿ ಹಾಗೂ ಕುಂದೂರು ಬೆಟ್ಟದ ಸಿದ್ದೇಶ್ವರ ಮಠದ ಮಹಂತೇಶ್ವರ ಸ್ವಾಮಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ನಿಜವಾದ ಶತ್ರು ಮತ್ತು ಮಿತ್ರರು ನಾವೇ ಆಗಿರುವಾಗ ನಾವೇ ನಮ್ಮ ಸಕಾರಾತ್ಮಕ ನಡವಳಿಕೆಗಳಿಂದ ತನುವನ್ನು ಸಂತೈಸಿಕೊಳ್ಳಬೇಕು. ಇದಕ್ಕಾಗಿ ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ.... ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯ ಎಂಬ ನಿಲುವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮೆದುರಿನ ವಿಷಯಗಳನ್ನು ಕಣ್ಣುಗಳಲ್ಲಿ ನೋಡಿ, ಕಿವಿಗಳಲ್ಲಿ ಕೇಳಿ ಮರುಕ್ಷಣವೇ ಮರೆಯುವುದರ ಬದಲು ಆತ್ಮದಲ್ಲಿ ಆವಾಹಿಸಿಕೊಳ್ಳಬೇಕು. ನನ್ನಿಂದೇನಾಗುತ್ತದೆ ಎಂದು ಚಿಂತಿಸುವ ಬದಲು, ನನ್ನಿಂದಲೇ ಎಲ್ಲವೂ ಎಂಬ ಆತ್ಮವಿಶ್ವಾಸದಿಂದಿರಬೇಕು. ನಾವು ಮಾಡಬೇಕೆಂದು ಬಯಸುವ ಕೆಲಸಗಳಿಗೆ ಸಮಯ ಬೇಕಿಲ್ಲ, ಮನಸ್ಸು ಬೇಕು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿರುವ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರ ಕಾರ್ಯಕ್ರಮ ಶರಣ ಬದುಕನ್ನು ವಚನಗಳ ಹಿನ್ನೆಲೆಯಲ್ಲಿ ಮನಗಾಣಿಸುವ ಪ್ರಯತ್ನವಾಗಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಪದ್ಮಾ ಸೋಮಶೇಖರ್, ಪ್ರಭಾರ ಮುಖ್ಯಶಿಕ್ಷಕ ದೇವರಾಜೇಗೌಡ, ಸಹಶಿಕ್ಷಕ ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net