

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀಮಠದ ಮೂಲ ಕರ್ತೃ ಪುರುಷ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ನೂತನ ರಥೋತ್ಸವ ಶುಕ್ರವಾರ ಭಕ್ತಗಣದ ಜಯೂಷದ ಮಧ್ಯೆ ಯಶಸ್ವಿಯಾಗಿ ಜರುಗಿತು.
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ರಥೋತ್ಸವಕ್ಕೆ ಚಾಲನೆ ನೀಡಿದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯರು, ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು, ಬೆಳಗುಂಪಾ ಬೃಹನ್ಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿಯ ಶ್ರೀ ಮರುಳಸಿದ್ಧ ಶಿವಾಚಾರ್ಯರು, ಸಂಗೊಳ್ಳಿಯ ಶ್ರೀಗುರುಲಿಂಗ ಶಿವಾಚಾರ್ಯರು, ಸತ್ತಿಗೇರಿಯ ಶ್ರೀಚಂದ್ರಶೇಖರ ಶಿವಾಚಾರ್ಯರು, ಇತರರು ಇದ್ದರು.
ಕರಡಿಮಜಲು, ಡೊಳ್ಳು, ಜಗ್ಗಲಿಗೆ, ರಂಜ್ ಸೇರಿ ವಿವಿಧ ಜನಪದ ವಾದ್ಯ&ಮೇಳಗಳೊಂದಿಗೆ ಆರಂಭಗೊಂಡ ರಥೋತ್ಸವ ಪಂಚಗೃಹ ಹಿರೇಮಠದಿಂದ ಹೊರಟು ಇಸ್ಲಾಂ ಧಮೀರ್ಯರ ಪ್ರಾರ್ಥನಾ ಮಂದಿರ, ಅಮ್ಮಿನಬಾವಿ ಮುಖ್ಯ ಪೇಟೆ ರಸ್ತೆಯಲ್ಲಿ ಸಂಚರಿಸಿ ಕರಡಿಗುಡ್ಡ ರಸ್ತೆಗೆ ಹೊಂದಿಕೊಂಡಿರುವ ಈಶ್ವರ ದೇವಾಲಯವರೆಗೆ ತೆರಳಿ ಪುನಃ ಪಂಚಗೃಹ ಹಿರೇಮಠ ತಲುಪಿತು.
ಅಮ್ಮಿನಬಾವಿ, ಮರೇವಾಡ, ತಿಮ್ಮಾಪುರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹು&ಧಾ ಮಹಾನಗರಗಳ ಅಪಾರ ಸಂಖ್ಯೆಯ ಭಕ್ತಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.