

ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ಧಾರೂಢರ ರಥೋತ್ಸವ ನಗರದ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ರಥವು ಮುಖ್ಯಬೀದಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದರು. ರಥವನ್ನು ನೋಡಿ ಕಣ್ತುಂಬಿಕೊಂಡರು. ‘ಶ್ರೀ ಸಿದ್ಧಾರೂಢ ಮಹಾರಾಜ್‌ಕೀ ಜೈ’ ಎನ್ನುವ ಭಕ್ತರ ಘೋಷಣೆ ಎಲ್ಲೆಡೆ ಮೊಳಗಿಸಿದರು. ‘ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ’ ಎನ್ನುವ ಹಾಡುಗಳನ್ನು ಭಕ್ತರು ಹಾಡಿದರು. ವಿವಿಧ ವಾದ್ಯ ಮೇಳಗಳು ರಥೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಉಭಯ ಶ್ರೀಗಳ ಮೂರ್ತಿ ಹೊತ್ತು ಸಾಗಿದ ರಥವು, ಶ್ರೀಮಠದಿಂದ ಹೊರಟು ಮಹಾದ್ವಾರ ತಲುಪಿ ಮರಳಿ ಶ್ರೀಮಠಕ್ಕೆ ಆಗಮಿಸಿತು.
ಬೆಳಗ್ಗೆಯಿಂದ ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಭಿಷೇಕ, ಪೂಜೆ, ಅಲಂಕಾರ, ನೈವೇದ್ಯ ಸಮರ್ಪಿಸಲಾಯಿತು. ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳ ದರ್ಶನ ಪಡೆದು ಕೃತಾರ್ಥರಾದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಭಜನಾ ಮಂಡಳಿಗಳು ಉಭಯ ಶ್ರೀಗಳ ಕುರಿತು ಭಜನೆ ಪದಗಳನ್ನು ಹಾಡಿ ಭಕ್ತಿ ಮೆರೆದರು.
ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳಿಗೆ ಹಣ್ಣು-ಹಂಪಲು, ನೈವೇದ್ಯ ಅರ್ಪಿಸಿದರು. ಭಕ್ತರಿಗಾಗಿ ಶ್ರೀಮಠದಿಂದ ಹಾಗೂ ಭಕ್ತ ಗಣಗಳಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಕ್ಕಳಾಗಲಿ ಅಜ್ಜಾ...
ಭಕ್ತರೊಬ್ಬರು ತಮ್ಮ ಬೇಡಿಕೆಯುಳ್ಳ ಬಾಳೆಹಣ್ಣನ್ನು ರಥಕ್ಕೆ ಎಸೆದಿದ್ದು, ಪೊಲೀಸರ ಕೈಗೆ ಸಿಕ್ಕಿದೆ. ಅದರ ಮೇಲೆ ‘ಮದುವೆ ಆಗಿ ಮೂವತ್ತು ವರ್ಷ ಆಯಿತು. ಮಕ್ಕಳು ಆಗಲಿ ಅಂತಾ ಫಲಕೊಡು ಅಜ್ಜಾ. ಅಜ್ಞಾನಿ ನಾನು ಆಶೀರ್ವಾದವಿರಲಿ ನನ್ನ ಮೇಲೆ. ನನಗೆ ಮಕ್ಕಳು ಆಗಲಿ ಅಜ್ಜಾ’ ಎಂದು ಬರೆಯಲಾಗಿದೆ.
ಸಂಚಾರ ದಟ್ಟಣೆ
ದೂರದ ಊರಿನಿಂದ ಭಕ್ತರು ಆಗಮಿಸಿ ಒಂದೆಡೆ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಲ್ಲದೇ ಸಂಚಾರ ಸುಗಮಕ್ಕೆ ಹರಸಾಹಸಪಟ್ಟರು. ರಥೋತ್ಸವ ನಡೆದ ಒಂದೆರಡು ಗಂಟೆಯಲ್ಲಿ ಸಂಚಾರ ಸುಗಮವಾಯಿತು.