

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನೃಸಿಂಹ ಜಯಂತಿ ಹಿನ್ನೆಲೆಯ ರಥೋತ್ಸವ ಭಕ್ತಿ ಭಾವದಲ್ಲಿ ಸೋಮವಾರ ಬೆಳಗಿನ ಜಾವ ಸಂಪನ್ನಗೊಂಡಿತು.
ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವರ ರಥೋತ್ಸವು ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನೆರವೇರಿತು.
ಕಲ್ಪೋಕ್ತ ಮಹಾ ಪೂಜೆ, ಮಹಾ ಮಂಗಳಾರತಿ ಪೂರ್ಣಗೊಂಡ ಬಳಿಕ 12 ಗಂಟೆಗೆ ಮಹಾರಥೋತ್ಸವಕ್ಕೆ ದೇವರನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆಯ ಮೂಲಕ ಚಂಡೆ, ವೇದಘೊಷ, ವಾಲಗಗಳ ಮೂಲಕ ಒಯ್ದು ತಡರಾತ್ರಿ 12:45ಕ್ಕೆ ಮಹಾರಥದಲ್ಲಿ ದೇವರ ಸ್ಥಾಪನೆ ನಡೆಯಿತು.
ರಥ ಬೀದಿಯಲ್ಲಿ ಸಿಂಗಾರಗೊಂಡ ರಥದಲ್ಲಿ ಶ್ರೀದೇವರನ್ನು ರಥಾರೂಢಗೊಳಿಸುವಾಗ ಭಕ್ತರು ಹರ್ಷೆದ್ಘಾರ ನಡೆಸಿದರು.
ಶ್ರೀಗಳಿಂದ ರಥದ ಗಾಲಿಪೂಜೆ, ರಥ ಕಾಣಿಕೆ ಸಲ್ಲಿಕೆ ಬಳಿಕ ನಡು ರಾತ್ರಿ 1 ಗಂಟೆ ವೇಳೆಗೆ ಭಕ್ತರಿಂದ ರಥ ಎಳೆಯುವ ಕಾರ್ಯಕ್ರಮ ನಡೆಯಿತು.
ರಥದ ನಿರ್ಮಾಣ ಹಾಗೂ ರಥೋತ್ಸವದಲ್ಲಿ ರಥದ ಗಾಲಿ ನಿರ್ವಹಣೆಯನ್ನು ಮುಸ್ಲಿಂ ಸಮುದಾಯದವರು ತಲ ತಲಾಂತರದಿಂದ ನಡೆಸಿಕೊಂಡು ಬಂದರೆ, ಪ್ರತಿ ವರ್ಷ ನಡೆಸುತ್ತಿದ್ದ ಸಿಡಿಮದ್ದು ಪ್ರದರ್ಶನದಲ್ಲಿ ಕ್ರೈಸ್ತ ಕುಟುಂಬದ ವ್ಯಕ್ತಿಗಳು ನಿರ್ವಹಿಸುವುದರಿಂದ ಈ ರಥೋತ್ಸವ ಭಾವೈಕ್ಯದ ರಥೋತ್ಸವ ಎಂದೇ ಹೆಸರಾಗಿದೆ.
ಇನ್ನು ರಥೋತ್ಸವದ ಬಳಿಕ ರಾತ್ರಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ ನೇತೃತ್ವದಲ್ಲಿ ಹೆಸರಾಂತ ಕಲಾವಿದರಿಂದ ಕಂಸ ದಿಗ್ವಿಜಯ -ಕಂಸ ವಧೆ ಯಕ್ಷಗಾನ ಬಯಲಾಟ ನಡೆಯಿತು. ನಾಗರಾಜ ಜೋಶಿ ಸೋಂದಾ ಸಂಯೋಜಿಸಿದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಇತರರು ಇದ್ದರು.
ಭಾರತ ಪಾಕಿಸ್ತಾನದ ನಡುವಿನ ಯುದ್ಧದ ಕಾರಣದಿಂದ ನೃಸಿಂಹ ದೇವರ ರಥೋತ್ಸವ ವೇಳೆ ಸುಡುಮದ್ದು ಪ್ರದರ್ಶನ ಕೈ ಬಿಡಲಾಗಿದೆ.
ಸ್ವರ್ಣವಲ್ಲೀಯ ಗುರುಗಳ ಸೂಚನೆಯ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರತೀ ವರ್ಷ ಅಂಕೋಲಾದ ಕ್ರೈಸ್ತ ಸಮುದಾಯದವರು ಈ ಸೇವೆ ಸಲ್ಲಿಸುತ್ತಿದ್ದರು. ರಥೋತ್ಸವದ ಸಂಭ್ರಮಕ್ಕೆ ಇದು ಮೆರುಗು ನೀಡುತ್ತಿತ್ತು.
ಈ ಮಧ್ಯೆ ಶ್ರೀಗಳು ಯುದ್ಧದಲ್ಲಿ ಭಾರತದ ವಿಜಯ ಪ್ರಾಪ್ತಿ ಹಾಗೂ ಸೈನಿಕರ ರಕ್ಷಣೆಗೂ ವಿಶೇಷವಾಗಿ ಪ್ರಾರ್ಥಿಸಿದರು.