

ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪ್ರಥಮ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಅರ್ಚಕರು ಶಿವಲಿಂಗಕ್ಕೆ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಪತ್ರೆ ಹಾಗೂ ವಿವಿಧ ಪೂಜಾ ಕಾರ್ಯ ನೆರವೇರಿಸಿದರು.
ಜಾತ್ರೆ ಅಂಗವಾಗಿ ಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿದ ರಥದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಸಂಜೆ 5ಕ್ಕೆ ಹೆಬ್ಬಳ್ಳಿ ಬ್ರಹ್ಮಚೈತನ್ಯ ಆಶ್ರಮದ ದತ್ತಾವಧೂತ ಮಹಾರಾಜರು ಹಾಗೂ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ದೇವಸ್ಥಾನದಿಂದ ಆರಂಭವಾದ ರಥೋತ್ಸವ ಹತ್ತಿರದ ಕಾಶಿ ವಿಶ್ವನಾಥ ದೇವಾಲಯವರೆಗೆ ರಥ ಎಳೆದು ಮರಳಿ ಮೂಲ ಸ್ಥಳಕ್ಕೆ ತಲುಪಿತು. ಸಕಲ ಮಂಗಳ ವಾಧ್ಯಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ರಥೋತ್ಸವದಲ್ಲಿ ಭಕ್ತರು ‘ಹರ ಹರ ಮಹಾದೇವ’ ಎಂಬ ಜೈ ಘೊಷಗಳು ಮೊಳಗಿದವು. ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ, ಲಿಂಬೆ ಎಸೆದು ಭಕ್ತಿ ಸಮರ್ಪಿಸಿದರು.
ಹೆಬ್ಬಳ್ಳಿ, ಶಿವಳ್ಳಿ, ಚಂದನಮಟ್ಟಿ, ತಲವಾಯಿ, ಕನಕೂರ, ಅಮ್ಮಿನಬಾವಿ ಸೇರಿ ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.