ರಂಗಾಯಣ ಶಿಬಿರಾರ್ಥಿ ಮಕ್ಕಳಿಂದ ರಥೋತ್ಸವ

30 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜೈಬಸವಣ್ಣ, ಬಸವೇಶ್ವರ ಮಹಾರಾಜ ಕಿ ಜೈ ಎಂದು ಕೂಗುತ್ತ ಮಕ್ಕಳು ತೇರನೆಳೆದ ವಿಶಿಷ್ಟ ಆಚರಣೆ ನಗರದ ರಂಗಾಯಣದಲ್ಲಿ ಬುಧವಾರ ನಡೆಯಿತು. ಮಕ್ಕಳು ಜಾತ್ರೆಗಳಿಂದ ದೂರ ಉಳಿದಿರುವ ಪ್ರಸ್ತುತ ದಿನಗಳಲ್ಲಿ ರಂಗಾಯಣವು ಬಸವ ಜಯಂತಿ ಅಂಗವಾಗಿ ಸೃಷ್ಟಿಸಿದ ಚಿಣ್ಣರ ಜಾತ್ರೆ ಬಲು ಜೋರಾಗಿತ್ತು.

ರಂಗಾಯಣವು `ನಮ್ಮ ಸಂವಿಧಾನ ನಮ್ಮ ಕಲರವ' ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಿದ್ದ ರಂಗಾಯಣ ತೇರಿಗೆ ರಂಗ ನಿರ್ದೇಶಕ ಬಿ.ಐ. ಈಳಿಗೇರ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದರು.

ಹಳ್ಳಿಗಳಲ್ಲಿರುವಂತೆ ರಂಗಾಯಣದ ತೇರನ್ನು ಸಿದ್ಧಪಡಿಸಿ ಡೊಳ್ಳು, ಜಗ್ಗಲಗಿ, ಕರಡಿ ಮಜಲುಗಳೊಂದಿಗೆ ಮಕ್ಕಳು ಬಸವಣ್ಣನ ಜಾತ್ರೆಯಲ್ಲಿ ಪಾಲ್ಗೊಂಡರು. ರಂಗಾಯಣದಿ0ದ ಆರಂಭಗೊ0ಡ ರಥೋತ್ಸವ ಕೋರ್ಟ್ ವೃತ್ತ, ಜ್ಯುಬಿಲಿ ವೃತ್ತ, ಕಲಾಭವನವರೆಗೆ ಸಾಗಿತು. ಕಲಿ- ನಲಿಗೆ ಸೀಮಿತವಾಗಿದ್ದ ಮಕ್ಕಳಿಗೆ ರಂಗಾಯಣದ ಜಾತ್ರೆಯು ಮನರಂಜನೆಯ ಮುದ ನೀಡಿತು.

ನಂತರ ಕಲಾಭವದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ, ರಂಗ ನಿರ್ದೇಶಕ ಪ್ರಭು ಹಂಚಿನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಿಬಿರದ ನಿರ್ದೇಶಕ ಲಕ್ಷ÷್ಮಣ ಪೀರಗಾರ, ಮಕ್ಕಳ ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net